ಕಾರವಾರ- ದೇಶ ಮಾತ್ರವಲ್ಲದೆ ವಿದೇಶದಲ್ಲೂ ಮೆಚ್ಚುಗೆಗೆ ಪಾತ್ರವಾದ ಕನ್ನಡದ ಕಾಂತಾರ ಸಿನಿಮಾವನ್ನು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಿಭಿನ್ನವಾಗಿ ವೀಕ್ಷಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯಿಂದ ಮೂಡಿಬಂದ ತುಳುನಾಡಿನ ದೈವಾರಾಧನೆ, ಕಂಬಳ ಸಹಿತ ಕರಾವಳಿ ಸಂಸ್ಕೃತಿಯನ್ನು ಬಿಂಬಿಸುವ ಕಾಂತಾರ ಸಿನಿಮಾವನ್ನು ಕುಂದಾಪುರ ಭಾಗದ ದೈವ ನರ್ತಕರು, ದರ್ಶನ ಪಾತ್ರಿಗಳ ಸಹಿತ, ದೈವದ ಸೇವೆ ಮಾಡುವ ಸಮಾಜ ಮತ್ತು ವ್ಯಕ್ತಿಗಳೊಂದಿಗೆ ಸಿನಿಮಾ ವೀಕ್ಷಿಸುವುದಾಗಿ ಸಚಿವರು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ತಾನು ಕುಂದಾಪುರ ಕೋಟೇಶ್ವರದ ಭಾರತ್ ಸಿನಿಮಾ ಮಂದಿರದಲ್ಲಿ ದೈವ ನರ್ತಕರು, ದರ್ಶನ ಪಾತ್ರಿಗಳು ಮತ್ತು ಸೇವೆ ಮಾಡುವವರ ಜೊತೆಗೆ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಈಗಾಗಲೇ ಸಿನಿಮಾ ಮಂದಿರದಲ್ಲಿ ನೂರಕ್ಕೂ ಅಧಿಕ ಟಿಕೆಟನ್ನು ಸಚಿವರ ಹೆಸರಿನಲ್ಲಿ ಕಾಯ್ದಿರಿಸಲಾಗಿದ್ದು, ಖುದ್ದು ಸಚಿವರೇ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ.
Source : Kannada Today