ಕುಮಟಾ : ಶೌರ್ಯದ ಪ್ರತೀಕ, ಸೌಹಾರ್ದತೆಯ ಸಂಕೇತವಾಗಿ ದೀಪಾವಳಿ ಹಬ್ಬದ ಬಲಿಪಾಡ್ಯಮಿಯಂದು ಕರಾವಳಿ ಭಾಗದ ಕುಮಟಾ ಹಾಗೂ ಅಂಕೋಲಾದಲ್ಲಿ ಕ್ಷತ್ರಿಯ ಕೊಮಾರಪಂತ ಸಮಾಜದವರು ಪಾರಂಪರಿಕವಾಗಿ ಆಚರಿಸಲಾಗುವ ಹೊಂಡೆ ಹಬ್ಬವು ಪಟ್ಟಣದಲ್ಲಿ ರೋಮಾಂಚನಕಾರಿಯಾಗಿ ನಡೆಯಿತು.
ಕರಾವಳಿ ಪ್ರದೇಶದಲ್ಲಿ ಪ್ರತಿಯೊಂದು ಹಬ್ಬಗಳಿಗೆ ಭಿನ್ನವಾದ ವಿಶೇಷತೆಗಳಿದ್ದು ಎಲ್ಲಾ ಹಬ್ಬಗಳನ್ನು ಸಂಪ್ರದಾಯದಂತೆ ಆಚರಿಸುತ್ತಾ ಬಂದಿರುತ್ತಾರೆ. ಅದರಂತೆ ದೀಪಾವಳಿ ಹಬ್ಬದಲ್ಲಿಯು ವಿಶೇಷತೆಗಳಿವೆ. ದೀಪಾವಳಿ ಹಬ್ಬದ ಬಲಿಪಾಡ್ಯಮಿಯಂದು ತಾಲೂಕಿನ ವಿಶಿಷ್ಠ ಆಚರಣೆಯ ಹಬ್ಬವೆ ಹೊಂಡೆ ಹಬ್ಬ.
ಪ್ರತಿ ವರ್ಷ ಬಲಿ ಪಾಡ್ಯಮಿಯ (ದೀಪಾವಳಿ ಹಬ್ಬದ) ದಿನ ಕುಮಟಾದ ಪಟ್ಟಣ ಹಾಗೂ ಕೆಲವು ಸ್ಥಳಗಳಲ್ಲಿ ಕವಣೆಗಳಲ್ಲಿ ಪಪ್ಪಾಯಿಯ ಕಾಯಿಗಳನ್ನು ಇಟ್ಟುಕೊಂಡು ಪರಸ್ಪರ ಎದುರಾಳಿಗಳ ಮೇಲೆ ಬೀಸುತ್ತಾ ಸಾಗುತ್ತಾರೆ. ಇದೊಂದು ತರಹದ ರೋಮಾಂಚನವೇ ಸರಿ. ಅಂತಹ ರೋಚಕಕ್ಷಣದ ನೈಜ ದೃಶ್ಯಾವಳಿಯನ್ನು ಯೋಗೇಶ ಮಡಿವಾಳ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಆ ವಿಡಿಯೋ ನಿಮಗಾಗಿ ಇಲ್ಲಿದೆ.
ವಿಡಿಯೋ ನೋಡಿ.
ಅಂಕೋಲಾದ ಕೆರೆಕಟ್ಟೆ, ಕುಂಬಾರಕೇರಿ ಮತ್ತು ಹೊನ್ನೇಕೇರಿ ಭಾಗದ ಕೋಮಾರಪಂತ ಸಮಾಜದ ಬಾಂಧವರು ಎರಡು ತಂಡಗಳಲ್ಲಿ ಎದುರು ಬದುರಾಗಿ ಕವಣೆಗಳಲ್ಲಿ ಹಿಂಡಲಕಾಯಿಗಳನ್ನು ಇಟ್ಟುಕೊಂಡು ಪರಸ್ಪರ ಎದುರಾಳಿಗಳ ಮೇಲೆ ಬೀಸುತ್ತಾ ಭೂಮ್ತಾಯಿ(ಶಾಂತಾದುರ್ಗಾ) ದೇವಸ್ಥಾನ ದಿಂದ ದೊಡ್ಡ ದೇವ್ರ(ವೆಂಕಟರಮಣ) ದೇವಸ್ಥಾನದ ವರೆಗೆ ವಾದ್ಯವೃಂದದೊಂದಿಗೆ ಮೆರವಣಿಗೆಯಲ್ಲಿ ಸಾಗುತ್ತಾರೆ.
ಕೆರೆಕಟ್ಟೆ, ಕುಂಬಾರಕೇರಿಯವರು, ಕುಂಬಾರಕೇರಿಯ ಕಳಸದೇವಸ್ಥಾನದಿಂದ ಹೊರಟು ಹೊಂಡೆ ಹೊಂಡೆ ಎಂದು ಕೂಗುತ್ತ ಎದುರಾಳಿಯನ್ನು ಎದುರಿಸಲು ಶಾಂತಾದುರ್ಗ ದೇವಸ್ಥಾನದ ಎದುರಿಗೆ ಬರುತ್ತಾರೆ. ಅಲ್ಲಿ ಇವರ ಬರುವಿಯನ್ನು ಕಾಯುತ್ತಿರುವ ಹೊನ್ನೇಕೇರಿ ತಂಡಕ್ಕೆ ಎದುರಾಗುತ್ತಾರೆ. ಅಲ್ಲಿ ಎರಡೂ ಗ್ರಾಮದ ಹಿರಿಯರಿಂದ ಹೊಂಡೆ ಆಟಕ್ಕೆ ಚಾಲನೆ ದೊರೆಯುತ್ತದೆ. ಅಂಕೋಲೆಯ ಪೇಟೆಯುದ್ದಕ್ಕೂ ಕವಣೆಗಳಿಂದ ಬೀಸಿ ಬರುವ ಹಿಂಡಲಕಾಯಿಗಳ ಸದ್ದು ಇತಿಹಾಸ ಕಾಲದ ಕೋವಿಯ(ಬಂಧೂಕಿನ) ಸದ್ದನ್ನು ನೆನಪಿಸುತ್ತದೆ. ಎದುರು ತಂಡದಿಂದ ಬೀಸಿ ಬರುವ ಹಿಂಡಲಕಾಯಿಗಳನ್ನು ಪರಸ್ಪರರು ಬಹಳ ಚಾಣಾಕ್ಷತೆಯಿಂದ ತಪ್ಪಿಸಿಕೊಳ್ಳುತ್ತಾರೆ. ಆದರೂ ಒಂಮ್ಮೊಮ್ಮೆ ಯಾಮಾರಿದಾಗ ಏಟು ಬೀಳುವುದುಂಟು.