ಕುಮಟಾ : ಮನೆ, ಮನಗಳಲ್ಲಿ ತಾಯಿ ಭಾಷೆ ಕನ್ನಡ ವಿಜೃಂಭಿಸುವ ಮೂಲಕ ತಾಯಿ ಭುವನೇಶ್ವರಿಯ ಸೇವೆ ಮಾಡೋಣ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್ಟ ಹೇಳಿದರು. ಕುಮಟಾ ಕನ್ನಡ ಸಂಘದ ವತಿಯಿಂದ ತಾಲೂಕಿನ ಜನತಾ ವಿದ್ಯಾಲಯ ಬಾಡ-ಕಾಗಾಲ ಪ್ರೌಢ ಶಾಲೆಯಲ್ಲಿ ಆಯೋಜಿಸಲಾದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿರುವ ತಾಯಿ ಭುವನೇಶ್ವರಿಯ ದೇಗುಲವಿರುವುದು ನಮಗೊಂದು ಹೆಮ್ಮೆಯ ಸಂಗತಿ. ಆಡು ಭಾಷೆಯಲ್ಲಿ ಕನ್ನಡವನ್ನು ಪ್ರೀತಿಯಿಂದ ಮಾತನಾಡುವುದರ ಜೊತೆಯಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೂ ಕನ್ನಡ ಮಾಧ್ಯಮದಲ್ಲಿ ಅಭ್ಯಸಿಸುವ ಮೂಲಕ ಮಾತೃ ಭಾಷೆಯನ್ನು ಇನ್ನಷ್ಟು
ಎತ್ತರಕ್ಕೇರಿಸಬಹುದಾಗಿದೆ. ಮಾತೃ ಭಾಷೆ ಕನ್ನಡವನ್ನು ಪ್ರೀತಿಸುವುದರ ಜೊತೆಯಲ್ಲಿ ಸಂವಹನಕ್ಕಾಗಿ ಇತರ
ಭಾಷೆಯನ್ನು ರೂಢಿಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಮಾತೃ ಭಾಷೆಯ ಉಢಾಫೆ ಸಲ್ಲದು. ಪ್ರತಿ
ಮನೆಯಲ್ಲಿ ಕನ್ನಡವನ್ನು ಆಡು ಭಾಷೆಯಾಗಿ ಬಳಸುವ ಮೂಲಕ ತಾಯಿ ಋಣವನ್ನು ತೀರಿಸಬಹುದಾಗಿದೆ. ಈ ನೆಲದ ಅನ್ನ ತಿನ್ನುವ ನಾವು ನಮ್ಮಮ್ಮನ ಭಾಷೆಯನ್ನು ಉಳಿಸಿ ಬೆಳೆಸುವ ಮೂಲಕ ತಾಯಿ ಸೇವೆ ಮಾಡಬಹುದಾಗಿದೆ. ಸರ್ಕಾರ ಕನ್ನಡ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಇಂತಹ ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ
ಕನ್ನಡಿಗರಲ್ಲಿ ಜಾಗೃತಿ ಮೂಡಿಸಿ ಸಾಮೂಹಿಕ ಗಾಯನವನ್ನು ಹಾಡುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಲು
ಮುಂದಾಗಿರುವುದು ಶ್ಲಾಘನೀಯ. ಈ ದಿಸೆಯಲ್ಲಿ ಕುಮಟಾ ಕನ್ನಡ ಸಂಘ ಉತ್ತಮ ಕಾರ್ಯಕ್ರಮ ಸಂಘಟಿಸಿ ತಾಯಿ
ಭಾಷೆ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇಂತಹ ಕನ್ನಡ ಪರ ಕಾರ್ಯಕ್ರಮ ಸಂಘಟಿಸುತ್ತಿರುವ ಕನ್ನಡ ಸಂಘದ ಅಧ್ಯಕ್ಷರು ಹಾಗೂ ಅವರ ಬಳಗಕ್ಕೆ ಶಿಕ್ಷಣ ಇಲಾಖೆ ಕೃತಜ್ಞವಾಗಿದೆ. ಸರ್ಕಾರದ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು ಎಂದರು.
ಈ ಸಂದರ್ಭದಲ್ಲಿ ಸರ್ಕಾರದ ಸೂಚನೆಯಂತೆ ಜನತಾ ವಿದ್ಯಾಲಯ ಬಾಡ-ಕಾಗಾಲ ಹಾಗೂ ಹುಬ್ಬಣಗೇರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಆರು ಹಾಡುಗಳನ್ನು ಏಕಕಾಲಕ್ಕೆ ಸುಶ್ರಾವ್ಯವಾಗಿ ಹಾಡುವ ಮೂಲಕ ಕಾರ್ಯಕ್ರಮ
ಯಶಸ್ವಿಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ, ಜನತಾ ವಿದ್ಯಾಲಯ ಬಾಡ-ಕಾಗಾಲ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವೀಣಾ ಮಾಳಗೇರ, ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷರಾದ ಉದಯ ಭಟ್ಟ, ಮಂಗಲದಾಸ ನಾಯ್ಕ, ಕೋಶಾಧ್ಯಕ್ಷ ಶಿವಯ್ಯ ಹರಿಕಾಂತ, ಮಾಧ್ಯಮ ಸಲಹೆಗಾರ ಸಂತೋಷ ನಾಯ್ಕ, ಸದಸ್ಯರಾದ ಮಮತಾ ನಾಯ್ಕ, ನಾರಾಯಣ ಪಟಗಾರ, ಸುರೇಶ ಭಟ್ಟ, ಈಶ್ವರ ಪಟಗಾರ, ನಾಗಪ್ಪ ಮುಕ್ರಿ, ರಾಘು ಗುನಗಾ, ವಿಕ್ರಮ್ ಪುರೋಹಿತ್ ಹಾಗೂ ಜನತಾ ವಿದ್ಯಾಲಯ ಬಾಡ-ಕಾಗಾಲ ಪ್ರೌಢ ಶಾಲೆ ಹಾಗೂ ಹುಬ್ಭಣಗೇರಿ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದದವರು ಇದ್ದರು.
ಶಿಕ್ಷಕ ಈಶ್ವರ ಭಟ್ಟ ಸ್ವಾಗತಿಸಿದರು. ಕುಮಟಾ ಕನ್ನಡ ಸಂಘದ ಸದಸ್ಯರಾದ ಆರ್. ಎನ್. ಹೆಗಡೆ ಪ್ರಾಸ್ತಾವಿಕ ಮಾತನಾಡಿದರು.