ಕುಮಟಾ : ಅದೆಷ್ಟೇ ಪ್ರಕರಣಗಳು ವರದಿಯಾಗಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಅದಷ್ಟೇ ಮುನ್ನೆಚ್ಚರಿಕೆ ವಹಿಸುತ್ತಿದ್ದರು, ಪ್ರವಾಸಕ್ಕೆ ಬರುತ್ತಿರುವವರು ಸಮುದ್ರ ಪಾಲಾಗುತ್ತಿರುವ ಘಟನೆ ಮುಂದುವರಿಯುತ್ತಲೇ ಇದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಗೋಕರ್ಣದ ಮುಖ್ಯ ಕಡಲತೀರದ ರುದ್ರಪಾದ ಬಳಿ ಈ ದುರಂತ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೆಂಗಳೂರಿನಿಂದ ನಾಲ್ವರು ಸ್ನೇಹಿತರೊಂದಿಗೆ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳಿಗೆ ಸಿಲುಕಿ ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ಅಭಿಷೇಕ (29) ಎಂಬವರು ಮೃತಪಟ್ಟಿದ್ದಾರೆ. ಅವರನ್ನು ರಕ್ಷಿಸಲು ಲೈಫ್‌ಗಾರ್ಡ್ ಸಿಬ್ಬಂದಿ ಪ್ರಯತ್ನಿಸಿದರು. ಆದರೆ ಆ ವೇಳೆಗಾಗಲೇ ಅವರು ನೀರಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದರು. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.