ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಹಿರಿಯ ಪ್ರಚಾರಕ, ಲೇಖಕ ಚಂದ್ರಶೇಖರ ಭಂಡಾರಿ (87) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಚಂದ್ರಶೇಖರ ಅವರು ಆರ್‌ಎಸ್‌ಎಸ್‌ನ ಪ್ರಚಾರ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೇಖಕ, ಅನುವಾದಕ, ಕವಿಯಾಗಿಯೂ ಗುರುತಿಸಿಕೊಂಡಿದ್ದ ಅವರು ಅಂಬೇಡ್ಕರ್ ಅವರ ಜೀವನದ ಕುರಿತ ಅನುವಾದಿತ ಕೃತಿಗೆ 2011ರಲ್ಲಿ ಕುವೆಂಪು ಭಾಷಾ ಪ್ರಾಧಿಕಾರದ ಪುಸ್ತಕ ಬಹುಮಾನ ನೀಡಲಾಗಿತ್ತು.
ದತ್ತೋಪಂತ ಠೇಂಗಡಿಯವರು ಬರೆದ ಅಂಬೇಡ್ಕರ್ ಕುರಿತಾದ ಕೃತಿಯನ್ನು ‘ಸಾಮಾಜಿಕ ಕ್ರಾಂತಿ ಸೂರ್ಯ ಡಾ.ಬಿ.ಆರ್.ಅಂಬೇಡ್ಕರ್’ ಹೆಸರಿನಲ್ಲಿ ಅನುವಾದಿಸಿದ್ದಾರೆ. ಅನುವಾದಿತ ಕೃತಿಗಳು, ವ್ಯಕ್ತಿ ಪರಿಚಯ, ವೈಚಾರಿಕ ಕೃತಿಗಳು ಹೀಗೆ ಹಲವು ರೀತಿಯ ಕೃತಿಗಳನ್ನು ಅವರು ರಚಿಸಿದ್ದಾರೆ. ಚಂದ್ರಶೇಖರ ಭಂಡಾರಿ ಅವರನ್ನು ‘ಸ್ಟಾಲ್ ಆಫ್ ದಿ ಅರ್ತ್’ ಎಂದೂ ಕರೆಯಲಾಗುತ್ತಿತ್ತು. ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ವಿಶ್ವ ಸಂವಾದ ಕೇಂದ್ರ ಸಂಸ್ಥೆಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದರು.
ಕುಟುಂಬ- ಒಂದು ಚಿಂತನೆ, ಜನಮನ ಶಿಲ್ಪಿ, ರಾಷ್ಟ್ರನಾಯಕ ಡಾ. ಅಂಬೇಡ್ಕರ್, ನಾನಾನಿಂದ ನೇತಾಜಿವರೆಗೆ ಸ್ವಾತಂತ್ಯ್ರ ಸಂಗ್ರಾಮ 1857-1957, ಪ್ರಕ್ಷುಬ್ಧ ಕಾಶ್ಮೀರ ಮುಂತಾದ ಕೃತಿಗಳನ್ನು ರಚಿಸಿದ್ದರು.
ಮೂಲತಃ ಮಂಗಳೂರಿನವರಾದ ಭಂಡಾರಿಗಳು ಸಂಘದ ಎರಡೂ ಪ್ರಾಂತಗಳ ಪ್ರಚಾರ ಪ್ರಮುಖರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಪಾವಧಿಯ ಕಾಲ ಅವರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿಯೂ ಜವಾಬ್ದಾರಿಯನ್ನು ಹೊಂದಿದ್ದರು.