ಕುಮಟಾ: ಕಳೆದ ಸುಮಾರು 50 ವರ್ಷಗಳಿಂದಲೂ ಅಮೇರಿಕಾ ನಿವಾಸಿಗಳಾಗಿದ್ದ ಕುಮಟಾ ಕಾಗಲ ಗ್ರಾಮ ಮೂಲದ ಡಾ.ನಾಗೇಶ ಸುಬ್ರಾಯ ರೇವಣಕರ್ (86)ರವರು ಅಕ್ಟೋಬರ್ 23ರಂದು ಅಮೇರಿಕಾದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಇವರ ನಿಧನದ ವಾರ್ತೆ ತಿಳಿದ ಲಯನ್ಸ್ ಹ್ಯುಮೆನಿಟೇರಿಯನ್ ಸರ್ವಿಸ್ ಟ್ರಸ್ಟ್ ,ಲಯನ್ಸ್ ಕ್ಲಬ್ ಕುಮಟಾ ರವರು ಲಯನ್ಸ್ ರೇವಣಕರ್ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯಲ್ಲಿ ಸಂತಾಪ ಸೂಚಕ ಸಭೆ ಸೇರಿ,ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ನಡೆಸಿ ಪೂಜ್ಯರ ಆತ್ಮಕ್ಕೆ ಸದ್ಗತಿ ಕೋರಿದರು.
ಆಸ್ಪತ್ರೆಯ ಟ್ರಸ್ಟ್ ಚೇರ್ಮನ್ ಮದನ ನಾಯಕ ರವರು ತಮ್ಮ ನುಡಿ ನಮನವನ್ನು ಸಲ್ಲಿಸುತ್ತಾ, ದೂರದ ವಿದೇಶದಲ್ಲಿದ್ದರೂ ತಮ್ಮ ಸ್ವಂತ ಊರಿಗೆ ಏನಾದರೂ ಸೇವೆ ಸಲ್ಲಿಸುವ ಉತ್ಕಟ ಇಚ್ಛೆ ಹೊಂದಿ ಡಾ. ನಾಗೇಶ ರೇವಣಕರ್ ರವರು 2006 ರಲ್ಲಿ ತಮ್ಮ ಸಹೋದರರೊಂದಿಗೆ ಕುಮಟಾ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಈ ಕಣ್ಣಿನ ಆಸ್ಪತ್ರೆಯನ್ನು ಸ್ಥಾಪಿಸುವಲ್ಲಿ ಕಾರಣರಾದರು. ಇವರು ಆಸ್ಪತ್ರೆಯ ಆರಂಭಿಕ ಹಂತದಲ್ಲೇ ಆಸ್ಪತ್ರೆ ನಿರ್ಮಿಸಲು ಅವಶ್ಯವಿರುವ ದೊಡ್ಡ ಮೊತ್ತದ ಧನ ಸಹಾಯ ನೀಡಿದ್ದನ್ನು ಸ್ಮರಿಸಿ,ಇಂದು ಈ ಆಸ್ಪತ್ರೆ ಇಷ್ಟೊಂದು ಬೃಹತ್ ಆಸ್ಪತ್ರೆಯಾಗಿ ರೂಪುಗೊಳ್ಳುವಲ್ಲಿ ಮಹಾದಾನಿಗಳಾದ ರೇವಣಕರ್ ಸಹೋದರರ ಪಾತ್ರ ಮಹತ್ವದ್ದಾಗಿದೆ ಎಂದರು.
ಹಿರಿಯ ಟ್ರಸ್ಟಿ ಸಂಸ್ಥಾಪಕ ಚೇರ್ಮನ್ ಡಾ.ಸಿ.ಎಸ್. ವೇರ್ಣೇಕರ, ಟ್ರಸ್ಟಿಗಳಾದ ಡಾ.ವಿ.ಆರ್.ನಾಯಕ, ಪ್ರೊ.ರೇವತಿ ರಾವ್ ,ಡಾ.ಸತೀಶ ಪ್ರಭು,ಡಾ.ಜಿ.ಜಿ.ಹೆಗಡೆ, ರಘುನಾಥ್ ದಿವಾಕರ್,ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಪಾಲ್ಗೊಂಡು ತಮ್ಮ ನಮನ ಸಲ್ಲಿಸಿದರು.
……………………………..
ಡಾ.ನಾಗೇಶ ರೇವಣಕರ್
ಸನ್ 1936 ಜುಲೈ 29 ರಂದು ಕುಮಟಾ ಸಮೀಪದ ಕಾಗಲ ಗ್ರಾಮದ ಶ್ರೀಮತಿ ಸರಸ್ವತಿ ಹಾಗೂ ಸುಬ್ರಾಯ ಗಣಪತಿ ರೇವಣಕರ ಅವರ ದ್ವಿತೀಯ ಸುಪುತ್ರರಾಗಿ ಜನಿಸಿದ ಡಾ.ನಾಗೇಶ ಅವರು ಕಾಗಲ ಪ್ರಾಥಮಿಕ ಶಾಲೆ, ಗಿಬ್ ಹೈಸ್ಕೂಲ್ ಗಳಲ್ಲಿ ಶಿಕ್ಷಣ ಪಡೆದು ಕುಮಟಾದ ಕೆನರಾ ಕಾಲೇಜಿನಲ್ಲಿ ಪದವಿ ಪಡೆದವರು.
ನಂತರ ಪೂನಾದ ಫೆರ್ಗುಸನ್ ಕಾಲೇಜಿನಲ್ಲಿ ಕಾಮರ್ಸ್ ಹಾಗೂ ಎಕೊನಾಮೆಟ್ರಿಕ್ಸ್ ನಲ್ಲಿ ಎಂ.ಕಾಂ.ಪದವಿಗಳನ್ನು ಪಡೆದರು.
ಇವರ ಅಪಾರ ಅಧ್ಯಯನ, ಕಲಿಸುವಿಕೆ, ಆಡಳಿತವನ್ನು ಗುರುತಿಸಿದ ಫೆರ್ಗ್ಯೂಸನ್ ಕಾಲೇಜ್ ಆಡಳಿತವು ಇವರನ್ನು ಕಾಲೇಜಿನ ಪ್ರಾಂಶುಪಾಲರನ್ನಾಗಿ ನೇಮಿಸಿಕೊಂಡಿತು.
ಇನ್ನೂ ಹೆಚ್ಚಿನ ಉನ್ನತ ಶಿಕ್ಷಣಕ್ಕಾಗಿ ಇಂಡಿಯಾ ಫೌಂಡೇಶನ್ ಅನುದಾನದೊಂದಿಗೆ ಅಮೆರಿಕಾಕ್ಕೆ ತೆರಳಿದ ಡಾ. ನಾಗೇಶ ಅವರು ಪ್ರೊಫೆಸರ್ ಜೆಲ್ನರ್ ಅವರೊಂದಿಗೆ ಅಧ್ಯಯನ ನಡೆಸಿ ಪಿ.ಎಚ್.ಡಿ. ಪದವಿ ಪಡೆದ ನಂತರ ವಿಸ್ಕನ್ಸನ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದರು.ಆ ಸಮಯದಲ್ಲಿ ಇವರ ಅಧೀನದಲ್ಲಿ ಪ್ರತಿವರ್ಷ ಹತ್ತರಿಂದ ಹನ್ನೆರಡು ವಿದ್ಯಾರ್ಥಿಗಳು ಪಿ.ಎಚ್.ಡಿ.ಪದವಿ ಗಳಿಸುತ್ತಿದ್ದರು. ಅಮೇರಿಕಾದಲ್ಲೇ ನಿವೃತ್ತ ಜೀವನ ನಡೆಸುತ್ತಿದ್ದ ಇವರು ಧರ್ಮಪತ್ನಿ,ಓರ್ವ ಪುತ್ರ, ಓರ್ವ ಪುತ್ರಿ,ಅಪಾರ ಬಂಧು ಬಳಗವನ್ನು ತಮ್ಮ 86 ನೇ ವರ್ಷದಲ್ಲಿ ಬಿಟ್ಟಗಲಿದ್ದಾರೆ.
- jb.