ಹೊನ್ನಾವರ : ದೇಶದ ಆಡಳಿತ ನಡೆಸುವ ಕರ್ತವ್ಯದಲ್ಲಿ ನಾನು ಸತ್ತರೇ, ಅದೆ ನನಗೆ ಹೆಮ್ಮೆಯಾಗಿದ್ದು, ನನ್ನ ದೇಹದ ಪ್ರತಿ ರಕ್ತದ ಹನಿಯೂ ಕೂಡ ದೇಶದ ಬೆಳವಣಿಗೆ ಮತ್ತು ಅಖಂಡ ಭಾರತದ ಐಕ್ಯತೆಗೆ ಮೂಡಿಪಾಗಿರಲಿ ಎಂದು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರು ತಮ್ಮ ಕೊನೆಯ ಸಾರ್ವಜನಿಕ ಸಭೆಯಲ್ಲಿ ದೇಶವನ್ನು ಉದ್ದೇಶಿಸಿ ನುಡಿದಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಹೇಳಿದರು. ಅವರು ಸೋಮವಾರ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಮಾಜಿ ಪ್ರಧಾನಿ ಇಂಧಿರಾ ಗಾಂಧಿಯವರ 38ನೇ ಪುಣ್ಯತಿಥಿ ಮತ್ತು ಭಾರತದ ಪ್ರಥಮ ಗೃಹ ಮಂತ್ರಿ ಸರದಾರ್ ವಲ್ಲಭ್ ಭಾಯಿ ಪಟೇಲ್ ಅವರ 147ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತಿದ್ದರು. ೮೦ರ ದಶಕದಲ್ಲಿ ಸಮಗ್ರ ಭಾರತದ ಐಕ್ಯತೆಗೆ ಸವಾಲಾಗಿ ಪರಿಣಮಿಸಿದ್ದ, ಪ್ರತ್ಯೇಕ ಖಲಿಸ್ತಾನ ದೇಶದ ಕನಸು ಕಂಡಿದ್ದ ಉಗ್ರಗಾಮಿಗಳ ಹುಟ್ಟಡಗಿಸಲು, ಆಪರೇಶನ್ ಬ್ಲೂ ಸ್ಟಾರ್ ಮೂಲಕ ಸೈನಿಕರನ್ನು ಸುವರ್ಣ ಮಂದಿರದಲ್ಲಿ ಬಿಟ್ಟು ಖಲಿಸ್ತಾನ ಉಗ್ರಗಾಮಿಗಳನ್ನು ಮಟ್ಟ ಹಾಕಿದ ದಿಟ್ಟ ಮಹಿಳೆ ಇಂದಿರಾ ಗಾಂಧಿ ಎಂದು ಹೆಮ್ಮೆ ವ್ಯಕ್ತ ಪಡಿಸಿದರು.
ಪಕ್ಷದ ಕಾರ್ಯಕರ್ತರು, ಮುಖಂಡರು ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ದೇಶದ ಪ್ರಥಮ ಗೃಹ ಮಂತ್ರಿ ಸರದಾರ ವಲ್ಲಬ್ ಬಾಯಿ ಪಟೇಲ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡಿ, ಒಂದು ನಿಮಿಷದ ಮೌನ ಆಚರಿಸಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ, ಜಿಲ್ಲಾ ಕಾಂಗ್ರೆಸ್ ಸದಸ್ಯೆ ಆಶಾ ಮಡಿವಾಳ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಹೊನ್ನಾವರ ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ,ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ,ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಮೋಹನ ಆಚಾರಿ ಇನ್ನೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು.