ದಾಂಡೇಲಿ : ತಾಲೂಕಿನ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬನು ಈಜಲು ನದಿಗೆ ಇಳಿದ ಸಂದರ್ಭದಲ್ಲಿ ಆತನ ಮೇಲೆ ಎರಡು ಮೊಸಲೇಗಳು ದಾಳಿ ನಡೆಸಿ ನಂತರ ಮೊಸಳೆಗಳು ಆತನನ್ನು ಎಳೆದೊಯ್ದಿವೆ ಎಂದು ವರದಿಯಾಗಿದೆ. ಈತ ಈಜಲು ನದಿಗೆ ಇಳಿದಿದ್ದಾಗ ಮೊಸಳೆಗಳು ಎಳೆದೊಯ್ದಿವೆ ಎಂದು ಹೇಳಲಾಗಿದೆ. ಮೊಸಳೆ ಎಳೆದೊಯ್ಯುವುದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗ ವ್ಯಕ್ತಿಗಾಗಿ ಕಾಳಿ ನದಿಯಲ್ಲಿ ಹುಡುಕಾಟ ನಡೆದಿದೆ. ಸ್ಥಳೀಯರ ಪ್ರಕಾರ, ಈ ವ್ಯಕ್ತಿ ನಂದಿ ದಂಡೆಯ ಮೇಲೆ ಬಟ್ಟೆ ಹಾಗೂ ಚಪ್ಪಲಿ ತೆಗೆದಿಟ್ಟು ಸ್ನಾನಕ್ಕಾಗಿ ನದಿಗೆ ಇಳಿದಿದ್ದಾರೆ. ಈ ಭಾಗದಲ್ಲಿ ಮೊಸಳೆ ಹೆಚ್ಚಿದೆ. ಹೀಗಾಗಿ ನೋಡಿದವರು ತಕ್ಷಣವೇ ಮೇಲೆ ಬರುವಂತೆ ಕೂಗಿ ಹೇಳಿದ್ದಾರೆ. ಆದರೆ ಇಳಿದ ಕೆಲವೇ ಹೊತ್ತಿನಲ್ಲಿ ಎರಡು ಮೊಸಳೆಗಳು ಆತನ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗಿದೆ.
ಇದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು, ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದಾರೆ.ಸ್ಥಳೀಯರು ಜಮಾಯಿಸಿದ್ದಾರೆ ಹಾಗೂ ಸಹಕರಿಸುತ್ತಿದ್ದಾರೆ. ದಾಂಡೇಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕಾಳಿ ನದಿಯಲ್ಲಿ ಮೊಸಳೆಗಳ ಸಂತತಿ ಗಣನೀಯವಾಗಿ ಏರಿವೆ. ಹೀಗಾಗಿ ಈಗ ನದಿ ದಂಡೆ ಪ್ರದೇಶಗಳಾದ ಹೊಸಕೊಣಪಾ ಗ್ರಾಮ ದಾಂಡೇಲಪ್ಪ ನಗರ, ಹಳಿಯಾಳ ರಸ್ತೆ, ಹಾಲಮಡ್ಡಿ ಗ್ರಾಮ ಹೀಗೆ ಹಲವು ಕಾಲೋನಿಗಳಿಗೆ ಮೊಸಳೆಗಳು ಆಹಾರ ಅರಸಿ ಬರುತ್ತಿವೆ. ಹೀಗೆ ಬಂದ ಮೊಸಳೆಗಳು ಮನೆಗಳಿಗೆ ನುಗ್ಗಿ ಸಾಕುಪ್ರಾಣಿಗಳನ್ನು ತಿನ್ನುತ್ತಿವೆ. ಮೊಸಳೆಯ ಕಾಟಕ್ಕೆ ಬೇಸತ್ತ ಜನ ಮೊಸಳೆಗಳು ನಗರ ಭಾಗಕ್ಕೆ ಬಾರದಂತೆ ತಪ್ಪಿಸಲು ನದಿ ಪ್ರದೇಶದ ನಾಲೆಗಳಿಗೆ ತಂತಿಯ ಬಲೆ ಕಟ್ಟಿ ಅದು ಗ್ರಾಮಗಳಿಗೆ ಪ್ರವೇಶಿದಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.