ಶಿರಸಿ: ನವೆಂಬರ್ 8 ರಂದು ಗ್ರಹಣ ಇರುವ ಕಾರಣದಿಂದ ಕರ್ನಾಟಕ ತಿರುಪತಿ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ.7ರಂದೇ ವನ ಭೋಜನ, ಲಕ್ಷ ದೀಪೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಶ್ರೀನಿವಾಸ ಭಟ್ಟ ತಿಳಿಸಿದ್ದಾರೆ.
ವಾರ್ಷಿಕ ಪದ್ಧತಿಯಂತೆ ವನಭೋಜನ, ಲಕ್ಷ ದೀಪೋತ್ಸವ ನಡೆಯಲಿದೆ. ಈ ಬಾರಿ ತ್ರಿಪುರಾಖ್ಯ ದೀಪೋತ್ಸವ ಸೋಮವಾರ ಇರುವ ಕಾರಣ ಬೆಳಿಗ್ಗೆ ವನಕ್ಕೆ ದೇವರು ಹೊರಡುವುದು, ಮಧ್ಯಾನ ವನಭೋಜನ, ಸಂಜೆ ಲಕ್ಷದೀಪೋತ್ಸವ, ಪಕ್ಸೋತ್ಸವ ಇತ್ಯಾದಿ ನಡೆಯಲಿದೆ. 8ರಂದು ಚಂದ್ರಗ್ರಹಣ ಇರುವ ಕಾರಣ ಅಂದು ಶ್ರೀ ದೇವಸ್ಥಾನದಲ್ಲಿ ಯಾವುದೇ ಉತ್ಸವ ಹಾಗೂ ಪ್ರಸಾದ ಭೋಜನ ಇರುವುದಿಲ್ಲ ಎಂದು ಶ್ರೀ ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಂಜಗುಣಿಯ ವಿಶೇಷತೆ ಇಲ್ಲಿದೆ.
ಸುಮಾರು ೯ನೇ ಶತಮಾನದಲ್ಲಿ ತಿರುಮಲ ಯೋಗಿಗಳು ತಿರುಪತಿಯಿಂದ ತೀರ್ಥಯಾತ್ರೆಗೆ ಹೊರಡುತ್ತಾರೆ. ಈಗಿನ ಮಂಜುಗುಣಿಯಿಂದ ೮ ಕಿಮೀ ದೂರದಲ್ಲಿರುವ ಗಿಳಿಲಗುಂಡಿ ಊರಿನ ಕೊಳದ ಬಳಿ ತಪಸ್ಸು ಮಾಡಲು ಆರಂಭಿಸುತ್ತಾರೆ. ಆ ಸಮಯದಲ್ಲಿ, ಶಂಖ-ಚಕ್ರ-ಧನುರ್ಬಾಣ ಧರಿಸಿದ ವೆಂಕಟೇಶ ವಿಗ್ರಹದ ದರ್ಶನವಾಯಿತು. ಅದನ್ನು ತಂದು ಮಂಜುಗುಣಿಯಲ್ಲಿ ಪ್ರತಿಷ್ಠಾಪಿಸುತ್ತಾರೆ.
ಮಂಜುಗುಣಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಊರು. ಶಿರಸಿಯಿಂದ ೨೬ ಕಿಲೋಮೀಟರ್ ದೂರದಲ್ಲಿರುವ ಇಲ್ಲಿನ ವೆಂಕಟರಮಣ ಮತ್ತು ಪದ್ಮಾವತಿಯರ ದೇವಸ್ಥಾನ ಪ್ರಸಿದ್ಧವಾಗಿದೆ. ಇದನ್ನು ಕರ್ನಾಟಕದ ತಿರುಪತಿ ಎಂದೂ ಕರೆಯುತ್ತಾರೆ. ಸಹ್ಯಾದ್ರಿಯ ತಪ್ಪಲಿನಲ್ಲಿರುವ ಈ ಪ್ರದೇಶದಲ್ಲಿ, ಚಳಿಗಾಲದಲ್ಲಿ ದಟ್ಟವಾದ ಮಂಜು ಮುಸುಕಿರುವುದರಿಂದ ಈ “ಮಂಜುಗುಣಿ” ಎಂದು ಕರೆಯಲಾಗುವುದೆಂದೂ ಹೇಳಲಾಗುತ್ತದೆ.
ಸುಂದರ ಕಲ್ಲಿನ ಕೆತ್ತನೆಗಳೊಂದಿಗೆ, ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ಬೃಹತ್ ರಥ, ಗೋಶಾಲೆ, ಅಶ್ವಶಾಲೆ, ಮಾರುತಿ ದೇವಸ್ಥಾನ ಮತ್ತು ಶ್ರೀ ಚಕ್ರತೀರ್ಥ ಕೆರೆ ಇಲ್ಲಿನ ವಿಶೇಷ ಆಕರ್ಷಣೆಗಳಾಗಿವೆ. ಪ್ರತಿನಿತ್ಯವೂ ಇಲ್ಲಿ ಉಚಿತ ಅನ್ನ ಸಂತರ್ಪಣೆ ನಡೆಯುತ್ತದೆ.