ಹೊನ್ನಾವರ: ಪಟ್ಟಣದ ಗೇರುಸೊಪ್ಪಾ ಕ್ರಾಸ್ ಸಮೀಪದಲ್ಲಿ ನೂತನವಾಗಿ ನಿರ್ಮಿಸಿದ ನಾಮಧಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನ ಉದ್ಘಾಟನಾ ಕಾರ್ಯಕ್ರಮ ಸಂಪನ್ನವಾಯಿತು. ದಶಕಗಳಿಂದ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದ್ದು, ಈ ಭಾಗದವರು ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಶನಿವಾರ ನಡೆದ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘದ ನೂತನ ನಾಮಧಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನ ಉದ್ಘಾಟಿಸಿ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಒಂದು ಕಾಲದಲ್ಲಿ ಬಡಸಮಾಜ ಎಂದು ಗುರುತಿಸಲ್ಪಡುತ್ತಿದ್ದ ಹಿಂದುಳಿದ ನಾಮಧಾರಿ ಸಮಾಜ ಈಗ ಹಿಂದಿಯ ‘ಬಡಾ’ ಸಮಾಜವಾಗಿದೆ. ಹಲವು ಸಂಕಷ್ಟದ ನಡುವೆಯು ಕೃಷಿ, ಶಿಕ್ಷಣ ಕ್ಷೇತ್ರದಲ್ಲಿ ಈ ಸಮಾಜದವರು ಸಾಧನೆ ಮಾಡಿದ್ದಾರೆ. ಇತರೆ ಎಲ್ಲಾ ರಂಗಕ್ಕಿಂತ ಶಿಕ್ಷಣ ಕ್ಷೇತ್ರಕ್ಕೆ ಬಂಡವಾಳ ಹಾಕಿದರೆ ಸಮಾಜ ಸುಶಿಕ್ಷಿತರ ಸಂಖ್ಯೆ ಹೆಚ್ಚಲಿದೆ. ಅದಕ್ಕೆ ತಾಲೂಕಿನ ಕಾಲೇಜಿಗೆ ಈ ಹಿಂದೆ ನೀಡಿದ ಅನುದಾನದಿಂದ ಉತ್ತಮ ಸೌಕರ್ಯದ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಜ್ಞಾನ ಲಭಿಸಿದೆ ಎಂದರು.
ಧರ್ಮಸ್ಥಳ ಯೋಜನೆಯಿಂದ 1600 ಕೋಟಿ ರೂ. ಪ್ರಯೋಜನ ಪಡೆದ ಜಿಲ್ಲೆಯಲ್ಲಿ ಒಂದು ರೂಪಾಯಿಯೂ ಕಟ್ಟಬಾಕಿ ಇಲ್ಲದಿರುವುದು ಅಭಿನಂದನೀಯ. ಜಿಲ್ಲೆಯ ಮೂಲಕ ಹಾದು ಹೋಗುವಾಗ ಜಿಲ್ಲೆಯ ಅಭಿವೃದ್ಧಿಯನ್ನು ಗಮನಿಸುತ್ತ ಬಂದಿದ್ದೇನೆ. ಮೊದಲಕ್ಕಿಂತ ಸಮಾಜ ಪ್ರಗತಿ ಸಾಧಿಸಿದ್ದು ಸಂತೋಷದ ಸಂಗತಿ. ಏನಿದ್ದರೂ ಶಿಕ್ಷಣವೇ ಶ್ರೇಷ್ಠ. ಎಲ್ಲ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸುತ್ತಿದ್ದೀರಿ. ಇದೆಲ್ಲಕ್ಕಿಂತ ಶಿಕ್ಷಣ- ಕ್ಕೆ ತೊಡಗಿಸುವ ಬಂಡವಾಳ ಕುಟುಂಬವನ್ನು ಮತ್ತು ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದರು.
ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೋಜನ ಶಾಲೆ ಉದ್ಘಾಟಿಸಿ ಮಾತನಾಡಿ, ಸಮಾಜದ ಪ್ರತಿಯೋರ್ವರು ಅವರ ಕರ್ತವ್ಯ ಪಾಲಿಸಿದರೆ ಸಂಘಟನೆ ಉತ್ತಮವಾಗಲಿದೆ ಎನ್ನುವುದಕ್ಕೆ ಇಂದಿನ ಕಾರ್ಯವೇ ಸಾಕ್ಷಿಯಾಗಿದೆ. ಭಗವಂತನ ಬೆಳಕು ಬಿದ್ದಲ್ಲಿ ಭಾಗೋದಯವಾಗುತ್ತದೆ. ಸಣ್ಣಪುಟ್ಟ ಪ್ರವಾಹಗಳು ಸೇರಿ ನದಿಯಾದಂತೆ ಇಂದಿನ ಕಾರ್ಯ ಬಹಳ ಮಹತ್ವದ್ದು ಎಂದರು.
ಜನರು ಪರಸ್ಪರ ದ್ವೇಷ, ಮತ್ಸರ, ಸಂಶಯದಿಂದ ಕಾಣದೆ ಕರ್ತವ್ಯ ಮಾಡುತ್ತ ಮುಂದೆ ಹೋಗಬೇಕು. ಸಾಮಾಜಿಕರ ನೇತೃತ್ವದಲ್ಲಿ ಸಮಾಜ ಬೆಳೆಯಬೇಕು. ಪರಸರ ಹೊಂದಿಕೊಂಡು ನದಿಗಳು ಐಕ್ಯವಾಗುವಂತೆ ಎಲ್ಲರೂ ಹೊಂದಿಕೊಂಡು ಧರ್ಮದಲ್ಲಿ ಐಕ್ಯವಾಗಬೇಕು. ಆ ಪಕ್ಷ ಈ ಪಕ್ಷ ಎಂಬ ವೈರಸ್ ಬೇಡ. ರಾಷ್ಟ್ರೀಯತೆಯ ದಿಕ್ಕಿನಲ್ಲಿ ಮುಂದುವರೆದು ಬಲಿಷ್ಠ ಸನಾತನ ಧರ್ಮ ಕಟ್ಟಬೇಕು. ರಾಜಕಾರಣ ಬೇಕು. ಆದರೆ ಅದು ಮಾಡೆಲ್ ಆಗಬಾರದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿ ಇಪ್ಪತ್ತಾರು ಉಪ ಪಂಗಡಗಳನ್ನು ಒಳಗೊಂಡಂತಹ ಒಂದು ವ್ಯವಸ್ಥೆ ನಮ್ಮದು. ಕರ್ನಾಟಕ ರಾಜ್ಯದಲ್ಲಿ ಕುಲ ಕಸುಬನ್ನು ಕಳೆದುಕೊಂಡಿರುವಂತ ಒಂದೇ ಒಂದು ಜಾತಿ ಎಂದರೆ ಅದು ಈಡಿಗರು ಬಿಲ್ಲವರು. ಈ ಕೊರಗು ಮತ್ತು ಆತಂಕಗಳ ನಡುವೆ ಈ ಸಮಾಜವನ್ನು ಕಟ್ಟುವಂತಹ ಅನೇಕ ಕ್ಷಣಗಳು ನಿರಂತರವಾಗಿ ನಡೆಯುತ್ತಿದೆ. ಸಮಾಜಕ್ಕೆ ಶಕ್ತಿ ಕೊಟ್ಟಂತಹ ಅನೇಕ ಮುಖಂಡರು, ರಾಜಕಾರಣವಾಗಿ, ಸಾರ್ವಜನಿಕವಾಗಿ, ಶೈಕ್ಷಣಿಕವಾಗಿ ನಮ್ಮ ಸಮಾಜದಲ್ಲಿದ್ದಾರೆ. ಹೊಸ ತಲೆಮಾರುಗಳು ಬರಬೇಕು ಅಂತ ಅನೇಕರಿಗೆ ಆಸೆ ಇದೆ, ಆಸಕ್ತಿಯೂ ಇದೆ. ಇನ್ನು ಹೊಸ ತಲೆಮಾರುಗಳು ಬರಬೇಕು, ಹೊಸತನ ಬರಬೇಕು, ಹೊಸ ಶಕ್ತಿ ಬರಬೇಕು. ಸಮಾಜದ ಕಟ್ಟ ಕಡೆಯವರಿಗೂ ಬದುಕಲಿಕ್ಕೆ ಬೇಕಾದಂತ ಯೋಜನೆಯನ್ನು ರೂಪಿಸುವಂತ ಅವಕಾಶಗಳು ನಮ್ಮ ಸಮಾಜದಲ್ಲಿ ಬರಬೇಕು ಎನ್ನುವಂತ ಕನಸುಗಳನ್ನು ಹೊತ್ತು ಅನೇಕ ನಮ್ಮ ಸಮಾಜದ ಸಂಘಟನೆಗಳು ಕೆಲಸ ಮಾಡುತ್ತಿದೆ. ಅದರ ಒಂದು ಭಾಗವಾಗಿ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘ ಹೊನ್ನಾವರ ಇಂದು ಕ್ರಾಂತಿಕಾರಿ ಕೆಲಸಗಳನ್ನು ಮಾಡಿದೆ. ಕೋಟ್ಯಂತರ ರೂಪಾಯಿಯಲ್ಲಿ ನಾಮಧಾರಿ ಸಭಾಭವನವನ್ನು ಮತ್ತು ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಿದೆ ಎಂದರು.
ಶಾಸಕ ದಿನಕರ ಶೆಟ್ಟಿ ಲಿಫ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿ ನಾಮಧಾರಿಗಳ ಶಕ್ತಿ ಪ್ರದರ್ಶನವಾದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದ್ದು, ಇತರೆ ಎಲ್ಲ ಸಮಾಜಕ್ಕೂ ಮಾದರಿಯಾಗಿದೆ. ಸುಸಜ್ಜಿತವಾದ ಸಮುದಾಯ ಭವನ ವಿದ್ಯಾರ್ಥಿ ನಿಲಯದ ಸೌಕರ್ಯ ಹೊಂದಿದ್ದು, ಇತರೆ ಎಲ್ಲ ಸಮಾಜಕ್ಕೂ ಇದರಿಂದ ಅನೂಕೂಲವಾಗಲಿದೆ ಎಂದರು.
ಶಾಸಕ ಸುನೀಲ ನಾಯ್ಕ, ದಿ.ವಿ.ಜಿ.ನಾಯ್ಕ ವೇದಿಕೆ ಹಾಗೂ ಸಭಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಸಚಿವ ಹಾಗೂ ಜಿಲ್ಲಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಎನ್.ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಎಂ.ಜಿ.ನಾಯ್ಕ, ಮಾಜಿ ಜಿಪಂ ಸದಸ್ಯ ದೀಪಕ ನಾಯ್ಕ, ಪುಷ್ಪಾ ನಾಯ್ಕ, ನಾಮಧಾರಿ
ನೌಕರರ ಸಂಘದ ಅಧ್ಯಕ್ಷ ಸುಧೀಶ ನಾಯ್ಕ, ಪಪಂ ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ, ನಿವೃತ್ತ ಎಸ್‌ಪಿ ಎಂ.ಟಿ.ನಾಯ್ಕ, ಪ್ರಾಂಶುಪಾಲೆ ಡಾ.ವಿಜಯಲಕ್ಷ್ಮಿ ನಾಯ್ಕ, ರಾಜೀವ್ ಎಂ.ಎನ್. ರಮೇಶ ನಾಯಕ, ಸುಚಿತ್ರಾ ನಾಯಕ, ಎಂ.ಆರ್.ನಾಯ್ಕ, ವಿ.ಜಿ.ನಾಯ್ಕ, ಚಂದ್ರಶೇಖರ ಗೌಡ, ಸಿ.ಬಿ.ನಾಯ್ಕ, ಎಂ.ಪಿ.ನಾಯ್ಕ, ಎಸ್.ಟಿ.ನಾಯ್ಕ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಹವನ,
ಶ್ರೀಸತ್ಯನಾರಾಯಣ ವ್ರತ ಪೂಜಾ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ನಡೆಯಿತು. ಮಾರುತಿ ನಾಯ್ಕ ಸಂಗಡಿಗರಿಂದ ಭಜನೆ, ಅನ್ವಿತಾ ನಾಯ್ಕ, ಇವರಿಂದ ಭರತನಾಟ್ಯ, ಸುಚಿತ್ರಾ ನಾಯ್ಕ ನಾಥಗೇರಿ ಇವರಿಂದ ಯೋಗ ಕಾರ್ಯಕ್ರಮ ಜರುಗಿತು. ನಂತರ ಸಂಜೆ 5 ಗಂಟೆಯಿಂದ ವಿವಿಧ ಕಲಾವಿದರ ಕೂಡುವಿಕೆಯಲ್ಲಿ ‘ರಾಣಿ ಶಶಿಪ್ರಭಾ’, ‘ಜಾಂಬವತಿ ಕಲ್ಯಾಣ’, ರಾಮಾಂಜನೇಯ’ ಯಕ್ಷಗಾನ ಜರುಗಿತು.