ಹೊನ್ನಾವರ : 67ನೆಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ಸಂಘ ಹಾಗೂ ಶ್ರೀಮಾತಾ ಪ್ರಕಾಶನ ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ಒಂದರಂದು ಹೊನ್ನಾವರದ ಎಂ.ಪಿ.ಈ. ಸೊಸೈಟಿಯ ಎಸ್.ಡಿ.ಎಂ. ಕಾಲೇಜಿನ ಆರ್.ಎಸ್. ಹೆಗಡೆ ಸಭಾ ಭವನದಲ್ಲಿ ‘ಕಡಲ ತೀರದ ಕನ್ನಡ ಹಬ್ಬ’ ಎಂಬ ವಿಶೇಷ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು. ಪ್ರೊ. ಎಂ. ನಾರಾಯಣ ಭಟ್ಟ ಅವರ ಕವನ ಸಂಕಲನ ‘ಕಾರ್ತಿಕ ಕಳೆದ ಮೇಲೆ’ ಕೃತಿ ಬಿಡುಗಡೆ, ಕನ್ನಡ ಹಾಡು ಹಾಗೂ ವಿಶೇಷ ಉಪನ್ಯಾಸ ಮೊದಲ ಅವಧಿಯಲ್ಲಿ ನಡೆಯಿತು. ಕೃತಿ ಬಿಡುಗಡೆ ಮಾಡಿದ ಶ್ರೀ. ಜಿ. ಯು, ಭಟ್ಟ ಅವರು ಮಾತನಾಡುತ್ತ ‘ಕೋಟಿಕಂಠ ಗಾಯನ, ಕೋಟಿ ಸೊಂಟ ನರ್ತನದಂಥ ಕಾರ್ಯಕ್ರಮಕ್ಕಿಂತ ವಿಭಿನ್ನ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕನ್ನಡದ ಉಳಿವಿಗಾಗಿ ಸಂಘಟಿಸಬೇಕಾಗಿದೆ. ನಾರಾಯಣ ಭಟ್ಟರ ವೈವಿಧ್ಯಮಯ ಸದಭಿರುಚಿಯ ಹವ್ಯಾಸ ಜೀವನೋತ್ಸಾಹ ಕನ್ನಡಿಗರಿಗೆ ಮಾದರಿಯಾದದ್ದು, ಕರ್ನಾಟಕ ಸಂಘ ಹಿರಿಯರ ಸಲಹೆ, ಕಿರಿಯರ ಕ್ರಿಯಾಶೀಲತೆಯೊಂದಿಗೆ ಮುಂದುವರಿಯಲಿ’ ಎಂದು ಹೇಳಿದರು.
‘ಹೊನ್ನಾವರದ ಐತಿಹಾಸಿಕ ಚಹರೆಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ. ಸುರೇಶ್ ತಾಂಡೇಲ ಅವರು ‘ಹೊನ್ನಾವರದ ಪ್ರಾಚೀನ ಕಾಲದ ಕುರಿತ ಶಾಸನ, ಕೈಫಿಯತ್ತುಗಳನ್ನು ಉಲ್ಲೇಖಿಸುತ್ತ ಚಾರಿತ್ರಿಕ ಮಹತ್ತ್ವವನ್ನು ಉಲ್ಲೇಖಿಸಿದರು. ಪ್ರಮುಖ ರಾಜರ, ಅರಸು ಮನೆತನಗಳ ಸಾಮಂತರ ಆಳ್ವಿಕೆಯ ಸಂಗತಿಗಳನ್ನು ಉಲ್ಲೇಖಿಸುತ್ತ ಜಗತ್ತಿನ ಚರಿತ್ರೆಯಲ್ಲಿ ಅರ್ಧ ಶತಮಾನಗಳಿಗಿಂತ ಹೆಚ್ಚುಕಾಲ ಹೊನ್ನಾವರ ಭಟ್ಕಳವನ್ನು ಕೇಂದ್ರವಾಗಿಸಿಕೊಂಡು ಆಳಿದ ಏಕೈಕ ರಾಣಿ ಚೆನ್ನಬೈರಾದೇವಿಯ ಸಾಧನೆಯನ್ನು ವಿವರಿಸಿದರು. ಹೊನ್ನಾವರದ ಬಂದರು ಜಗತ್ತಿನ ಜತೆಗೆ ಸಂಪರ್ಕ ಕಲ್ಪಿಸಿದ ಬಂದರುಗಳಲ್ಲಿ ಪ್ರಾಚೀನವಾದುದು ಎಂದು ವಿವರಿಸಿದರು.
ಯುವ ಸಂಗೀತ ಕಲಾವಿದೆ, ಉಪನ್ಯಾಸಕಿ ಕು. ಸಂಗೀತಾ ನಾಯ್ಕ ಅವರು ಕನ್ನಡದ ಸಾಹಿತ್ಯಕ ಸಾಂಸ್ಕೃತಿಕ ಪರಂಪರೆಯನ್ನು ನೆನಪಿಸುವ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.
ಬಿಡುಗಡೆಗೊಂಡ ಕೃತಿಯ ಕುರಿತು ಮಾತನಾಡುತ್ತ ಬೆಂಗಳೂರಿನ ರವಿಕುಮಾರ್ ಕಾರ್ತಿಕ ಕಳೆದ ಮೇಲೆ ‘ಸಂಕಲನದ’ ಕವಿತೆಗಳು ವೈವಿಧ್ಯಮಯವಾದ ವಸ್ತು, ಸಾಮಾನ್ಯ ಸಂಗತಿ, ದೈನಂದಿನ ವಿದ್ಯಮಾನಗಳ ಕುರಿತಾಗಿನ ಸೂಕ್ಷ್ಮ ಪ್ರತಿಕ್ರಿಯೆಯಿಂದ ಸೊಗಸಾಗಿ ಮೂಡಿಬಂದಿವೆ’ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಡಾ. ಎನ್. ಆರ್. ನಾಯಕ ಅವರು ಕನ್ನಡ ಅತ್ಯಂತ ಶ್ರೀಮಂತವಾದ ಭಾಷೆ, ಹಲವು ಕನ್ನಡಗಳಿಂದ ಪ್ರಾದೇಶಿಕ
ಹಾಗೂ ಸಾಮಾಜಿಕ ಉಪಭಾಷೆಗಳಿಂದ ಇದು ಅಪಾರ ಪದಸಂಪತ್ತನ್ನು ಹೊಂದಿದೆ ಹಾಗೂ ಸಾಹಿತ್ಯಕ ಶ್ರೀಮಂತಿಕೆಯನ್ನು ಪಡೆದಿದೆ. ಇಂಥ ಭಾಷೆಯನ್ನು ಅದರೆಲ್ಲ ಸಮೃದ್ಧತೆಯೊಂದಿಗೆ ನಾವು ಮುನ್ನಡೆಸಬೇಕಾಗಿದೆ ಎಂದು ಹೇಳುತ್ತ ಸ್ನೇಹಿತ, ಸಹೋದ್ಯೋಗಿ ಎಂ. ನಾರಾಯಣ ಭಟ್ಟರ ಕಾವ್ಯದ ಸೊಗಸನ್ನು ಬಣ್ಣಿಸಿದರು.
ಹೊನ್ನಾವರದ ಕುರಿತು ವಿಶೇಷ ಉಪನ್ಯಾಸ ನೀಡಿದ ಸುರೇಶ್ ತಾಂಡೇಲರ ಅಧ್ಯಯನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತ, ಶಾಸನ ಕೈಫಿಯತ್ತುಗಳ ಜೊತೆಗೆ ಚರಿತ್ರೆಯ ಸಂಗತಿಗಳನ್ನು ಗಮನಿಸುವಾಗ ಐತಿಹ್ಯ ಹಾಗೂ ವದಂತಿಗಳನ್ನು ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟರು.
ಆರಂಭದಲ್ಲಿ ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕ ಮಾತುಗಳನ್ನಾಡಿ ಕರ್ನಾಟಕ ಸಂಘದ ಹಿನ್ನೆಲೆ, ಆಶಯಗಳ ಕುರಿತು ವಿವರಿಸಿ, ಎಲ್ಲರನ್ನೂ ಸ್ವಾಗತಿಸಿದರು. ಕು. ನಿಹಾರಿಕ ಭಟ್ಟ ಕನ್ನಡದಗೀತೆಯ ಮೂಲಕ ಕಾರ್ಯಕ್ರಮಕ್ಕೆ ಶುಭ ಚಾಲನೆ ನೀಡಿದರು. ಪ್ರಶಾಂತ ಹೆಗಡೆ ಮೂಡಲಮನೆ ಹಾಗೂ ವಿದ್ಯಾಧರ ನಾಯ್ಕ ಕಡತೋಕಾ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ
ಪರವಾಗಿ ಪ್ರೊ. ಎಂ. ನಾರಾಯಣ ಭಟ್ಟ ದಂಪತಿಗಳನ್ನು ಡಾ. ಎನ್.ಆರ್. ನಾಯಕ, ಕೃಷ್ಣಮೂರ್ತಿ ಭಟ್ಟ ಶಿವಾನಿ, ಶ್ರೀ ಜಿ. ಯು. ಭಟ್ಟ ಹಾಗೂ ವೇದಿಕೆಯ ಗಣ್ಯರು ಸನ್ಮಾನಿಸಿದರು.
ಕವಿ. ಪ್ರೊ. ಎಂ. ನಾರಾಯಣ ಭಟ್ಟ ಸನ್ಮಾನಕ್ಕೆ ಪ್ರತಿಕ್ರಿಯಿಸಿ ತಾನು ರಚಿಸಿದ ಕವಿತೆ ಪ್ರಕಟಗೊಂಡು ಬಿಡುಗಡೆಗೊಂಡಿದೆ. ತನ್ನಲ್ಲಿರುವ ಅಪರೂಪದ ತತ್ತ್ವಗಳ, ಕಲಾಕೃತಿಗಳ ಸಂಗ್ರಹಗಳು ಮುಂದಿನ ತಲೆಮಾರಿಗೆ ಉಪಯುಕ್ತಗೊಳ್ಳುವಂತಾಗಬೇಕಿದೆ ಎಂದು
ಹಂಬಲಿಸಿದರು.