ಇದೇ ನವೆಂಬರ್ 11 ರ ಶುಕ್ರವಾರದಂದು ಬೆಂಗಳೂರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣವಾಗಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣಗೊಳ್ಳಲಿದೆ.
ಕೆಂಪೇಗೌಡ ಅವರ ಇತಿಹಾಸ, ಸಾಧನೆ ಮತ್ತು ಪರಂಪರೆಯನ್ನು ಸಾರುವ ಆಕರ್ಷಕ ಕೆಂಪೇಗೌಡ ಥೀಮ್ ಪಾರ್ಕ್ ಕೂಡಾ ಅಂದೇ ಲೋಕಾರ್ಪಣೆಗೊಳ್ಳುತ್ತಿದೆ. ಥೀಮ್ ಪಾರ್ಕ್ ಸ್ಥಾಪನೆಗೆ ಸರಕಾರವು 30 ಕೋಟಿ ವಿನಿಯೋಗಿಸುತ್ತಿದೆ. 23 ಎಕರೆಯಲ್ಲಿ ಪಾರ್ಕ್ ನಿರ್ಮಾಣವಾಗಿದೆ. 218 ಟನ್ ಕಂಚು ಹಾಗೂ ಉಕ್ಕನ್ನು ಬಳಸಿಕೊಂಡು ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. 98 ಟನ್ ಕಂಚು, 120 ಟನ್ ಉಕ್ಕನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕೆಂಪೇಗೌಡರು ಕೈಲಿ ಹಿಡಿದಿರುವ ಖಡ್ಗದ ತೂಕ ಬರೋಬ್ಬರಿ 4 ಸಾವಿರ ಕೆ.ಜಿ ಇದೆ.
ಈ ಎಲ್ಲಾ ಐತಿಹಾಸಿಕ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರಮೋದಿ ಆಗಮಿಸುತ್ತಿದ್ದು, ಅವರಿಗೆ ಗೌರವಪೂರ್ವಕವಾಗಿ ಮೈಸೂರು ಮಹಾರಾಜರು ಹಾಕಿಕೊಳ್ಳುತ್ತಿದ್ದ ಮಾದರಿಯ ಪೇಟವನ್ನು ಸಿದ್ದತೆ ಮಾಡಲಾಗಿದ್ದು, ಅದನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರಿಗೆ ಹಸ್ತಾಂತರಿಸಲಾಗಿದೆ.
ಬೆಂಗಳೂರಿಗೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ದೊಡ್ಡದಿರುವುದರಿಂದ 25 ಲಕ್ಷ ಹಾಗೂ 100 ಕೌಂಟರ್‌ಗಳ ಸಾಮರ್ಥ್ಯದ ಹೊಸ ಟರ್ಮಿನಲ್ ಅಗತ್ಯವಾಗಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ (ಚೆನ್ನೈ-ಮೈಸೂರು-ಬೆಂಗಳೂರು) ರೈಲಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಹೈಸ್ಪೀಡ್ ವಿಶೇಷ ರೈಲು ಕರ್ನಾಟಕ ರಾಜ್ಯದ ಜನರ ಬಹುಕಾಲದ ಬೇಡಿಕೆಯಾಗಿತ್ತು.
ನವೆಂಬರ್ 11ರಂದು ಪ್ರಧಾನಿ ಮೋದಿ ತಮ್ಮ ಭೇಟಿಯ ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ಸಾರ್ವಜನಿಕ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.