ಮಡಿಕೇರಿ : ಯವಕ-ಯುವತಿಯರಿಗೆ ಉಚಿತ ಬ್ಯಾಕಿಂಗ್ ತರಬೇತಿ ನೀಡಿ ಅವರು ಉದ್ಯೋಗ ಪಡೆಯಲು ನೆರವಾದ ನಿವೃತ್ತ ಬ್ಯಾಂಕ್ ಅಧಿಕಾರಿ ಶಿರಸಿ ಮೂಲದ ಆರ್.ಕೆ. ಬಾಲಚಂದ್ರ ಅವರಿಗೆ ಈಚೆಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ವಿಸ್ತಾರ ಕಾಯಕ ಯೋಗಿ’ ಪುರಸ್ಕಾರ ನೀಡಿ ಗೌರವಿಸಲಾಯಿತು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮಡಿಕೇರಿ ಜಿಲ್ಲೆಯ ಜಿಲ್ಲಾ ಅಗ್ರಣಿ ಬ್ಯಾಂಕ್ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಆರ್.ಕೆ. ಬಾಲಚಂದ್ರ ಅವರು ತಮ್ಮ ಸೇವೆಯುದ್ದಕ್ಕೂ ರಜಾ ದಿನ ಹಾಗೂ ಬಿಡುವಿನ ವೇಳೆಯನ್ನು ವಿದ್ಯಾರ್ಥಿಗಳಿಗೆ, ಬ್ಯಾಂಕಿಂಗ್ ಹಾಗೂ ಇತರೆ ಸರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ತರಬೇತಿ ನೀಡುತ್ತಿದ್ದರು. ಮಡಿಕೇರಿಯಲ್ಲಿಯೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದೊಂದಿಗೆ ಕಲಾ-ವಿಜ್ಞಾನ, ವಾಣಿಜ್ಯದ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಿದ್ದಾರೆ. ರಾಜ್ಯದ ಅನೇಕ ಪತ್ರಿಕೆಗಳಿಗೆ ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಬಗ್ಗೆ ಲೇಖನಗಳನ್ನು ಬರೆಯುತ್ತಿದ್ದಾರೆ.ಪ್ರಶಸ್ತಿ ಬಗ್ಗೆ ತಮ್ಮ ಅನಿಸಿಕ ಹಂಚಿಕೊಂಡ ಆರ್.ಕೆ. ಬಾಲಚಂದ್ರ, ‘ಬ್ಯಾಂಕಿಗೆ ಪರೀಕ್ಷೆಗೆ ತಯಾರಿ ಬಗ್ಗೆ 1985ರಿಂದಲೂ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದ್ದೇನೆ. ಇಲ್ಲಿಯವರೆಗೆ ಸರ್ಕಾರಿ, ಆರೆ ಸರ್ಕಾರಿ ಹಾಗೂ ಬ್ಯಾಂಕಿಂಗ್ ಪರೀಕ್ಷೆ ತಯಾರಿ ನಡೆಸುವ 4.5 ಲಕ್ಷ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರೆ, ಅವರಲ್ಲಿ ಸಾವಿರಾರು ಜನರು ಉದ್ಯೋಗ ಪಡೆದುಕೊಂಡಿದ್ದಾರೆ.ಬ್ಯಾಂಕಿಂಗ್ ಕ್ಷೇತ್ರದಿಂದ ವಿಸ್ತಾರಕಾಯಕ ಯೋಗಿ ಪ್ರಶಸ್ತಿ ಪಡೆದ ರಾಜ್ಯದ ಮೊದಲ ಬ್ಯಾಂಕರ್ ಎಂಬುದು ಅತ್ಯಂತ ಹೆಮ್ಮೆಯ ಸಂಗತಿ’ ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹಾಗೂ ಹರಿಪ್ರಸಾದ್ ಕೋಣೆಮನೆ ಇದ್ದರು.