ಬೆಂಗಳೂರಿನ ಹೆಬ್ಬಾಗಿಲು ಎಂದೇ ಗುರುತಿಸಲಾಗಿರುವುದು ತುಮಕೂರು ಜಿಲ್ಲೆಯಲ್ಲಿನ ಶಿವಗಂಗೆ ಬೆಟ್ಟ.
ಸಮುದ್ರ ಮಟ್ಟದಿಂದ 4,547 ಅಡಿ ಎತ್ತರದಲ್ಲಿರುವ ಶಿವಗಂಗೆ ಶಂಖಾಕೃತಿಯ ಬೆಟ್ಟ. ಪೂರ್ವದಿಂದ ಬಸವ, ಪಶ್ಚಿಮದಿಂದ ಗಣೇಶ, ಉತ್ತರದಿಂದ ಶಿವಲಿಂಗ, ದಕ್ಷಿಣದಿಂದ ಸರ್ಪದ ಆಕಾರದಲ್ಲಿ ಕಾಣುತ್ತದೆ. ‘ದಕ್ಷಿಣ ಕಾಶಿ’ ಎಂದೇ ಪ್ರಸಿದ್ಧಿಯನ್ನೂ ಪಡೆದಿದೆ.

ಇದು ವರ್ಷವಿಡೀ ಜಲಧಾರೆಯನ್ನು ಹೊಂದಿರುವ ಅದ್ಭುತ ಬೆಟ್ಟ. ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಾಲಯಕ್ಕೆ ಇಲ್ಲಿರುವ ರಹಸ್ಯ ಸುರಂಗ ಮಾರ್ಗದಲ್ಲಿ ಸಾಗಿದರೆ ಶ್ರೀರಂಗಪಟ್ಟಣವನ್ನೂ ತಲುಪಬಹುದಂತೆ!

ಶಿವಗಂಗೆ ಮೂಲತಃ ಸಣ್ಣ ಗುಡ್ಡ. ಈ ಗುಡ್ಡದಲ್ಲಿರುವ ಶಿವನ ದೇವಾಲಯದಿಂದ ಇದಕ್ಕೆ ಶಿವಗಂಗೆ ಎಂಬ ಹೆಸರು ಬಂತು. ಇಲ್ಲಿ ಒಂದು ನೀರಿನ ಬುಗ್ಗೆ ಇದ್ದು, ಅದು ಈ ಸ್ಥಳದ ಸೊಬಗನ್ನು ಇಮ್ಮಡಿಗೊಳಿಸುತ್ತಿದೆ. ಸ್ಥಳೀಯರ ಪ್ರಕಾರ ಈ ನೀರಿನ ಬುಗ್ಗೆಯು ಪವಿತ್ರ ಗಂಗೆಯ ಒಂದು ಉಪಶಾಖೆಯಾಗಿದ್ದು, ಆ ಕಾರಣದಿಂದ ಈ ಸ್ಥಳಕ್ಕೆ ಶಿವಗಂಗೆ ಎಂಬ ಹೆಸರು ಬಂದಿದೆ.

RELATED ARTICLES  ಸೇಡು..! ಸೇಡು...! ಸೇಡು..! ಅನಂತಕುಮಾರ್ ಹೆಗಡೆ ಹೇಳಿದ್ದೇನು?

ಬೆಟ್ಟದ ಮೇಲೆ ಇರುವ ಗಂಗಾಧರೇಶ್ವರನ ಲಿಂಗದ ಮೇಲೆ ತುಪ್ಪವನ್ನು ಹಾಕಿದರೆ ಬೆಣ್ಣೆಯಾಗಿ ಪರಿವರ್ತನೆ ಆಗುತ್ತದೆ ಎಂಬುದು ಪ್ರತೀತಿ. ಬೆಟ್ಟದ ಶಿವಲಿಂಗದ (ಗಂಗಾಧರೇಶ್ವರ) ಎದುರು ನಂದಿ ವಿಗ್ರಹವಿದೆ. ಎಡಕ್ಕೆ ಪಾರ್ವತಿ ದೇವಸ್ಥಾನ, ಮುಂಭಾಗದಲ್ಲಿ ಕೆಂಪೇಗೌಡರ ಖಜಾನೆ ಇದ್ದ ಗುಹೆಯಿದೆ.
ಅಲ್ಲಿಂದ ಸ್ವಲ್ಪ ದೂರದಲ್ಲಿ ಸುಂದರ ಕೆತ್ತನೆಯ ಏಕಶಿಲಾ ಸ್ಥಂಭಗಳಿಂದ ನಿರ್ಮಾಣವಾದ ಕೆಂಪೇಗೌಡರ ಹಜಾರ, ಕಲ್ಯಾಣ ಮಂಟಪ, ಸಪ್ತ ಮಾತೃಕೆ, ನವಗ್ರಹ ವಿಗ್ರಹಗಳಿವೆ. ಅಗಸ್ತ್ಯ ಋಷಿಗಳು ಇಲ್ಲಿ ತಪಸ್ಸು ಮಾಡಿದ ಸ್ಥಳ ಎನ್ನಲಾದ ಅಗಸ್ತ್ಯ ತೀರ್ಥದ ಸುತ್ತ ನೂರೆಂಟು ಶಿವಲಿಂಗಗಳಿವೆ.

ಸಮೀಪದಲ್ಲಿ ಕಮಲ ತೀರ್ಥ, ಉತ್ತರಕ್ಕೆ ಶೃಂಗೇರಿ ಶಾರದಾ ಪೀಠ ಮತ್ತು ವಹ್ನಿ ಕುಲದ ಮಹಾಲಕ್ಷ್ಮೀ ಪೀಠವಿದೆ. ಪೂರ್ವಕ್ಕೆ ಬೃಹದಾಕಾರದ ರಾಚೋಟಿ ವೀರಭದ್ರಾಲಯದ ಎತ್ತರದ ಗಂಟೆ ಕಂಬ, ಹರಕೆ ಗಣಪ, ಪಾತಾಳಗಂಗೆಗೆ ಹೋಗುವ ಮಾರ್ಗದಲ್ಲಿ ಕ್ಷೇತ್ರದ ಅಧಿ ದೇವತೆ ಹೊನ್ನಾದೇವಿ ದೇವಸ್ಥಾನವಿದೆ
ಶಿವಗಂಗೆ ಬೆಟ್ಟದ ವಿಶೇಷವೆಂದರೆ ಪೂರ್ವಕ್ಕೆ ವೃಷಭಾಕೃತಿ, ದಕ್ಷಿಣಕ್ಕೆ ಲಿಂಗಾಕೃತಿ, ಪಶ್ಚಿಮಕ್ಕೆ ಗಣಪತಿ, ಉತ್ತರಕ್ಕೆ ಸರ್ಪದ ಆಕೃತಿಯಂತೆ ಕಾಣುತ್ತದೆ. ವಿಷ್ಣುವರ್ಧನನ ಪಟ್ಟ ಮಹಿಷಿ ಶಾಂತಲಾ ದೇವಿಯು ಶಿವಗಂಗೆಯಲ್ಲಿ ಸಲ್ಲೇಖನ ವ್ರತ ಕೈಗೊಂಡು ಮುಕ್ತಿ ಪಡೆದ ಸಂಗತಿ ಕ್ರಿ.ಶ.1131ರ ಶ್ರಾವಣ ಬೆಳಗೊಳದ ಶಾಸನದಲ್ಲಿ ಉಲ್ಲೇಖವಾಗಿದೆ
ಬೆಟ್ಟದಲ್ಲಿ ಸ್ವಲ್ಪ ಮೇಲೆ ಏರಿದರೆ ಒಳಕಲ್ಲು ತೀರ್ಥ ಎನ್ನುವ ಮತ್ತೊಂದು ಸ್ಥಳವಿದೆ. ಇಲ್ಲಿ ವರ್ಷವಿಡೀ ನೀರು ದೊರೆಯುತ್ತದೆ.

ಹೀಗಿದೆ ಇತಿಹಾಸ, ಪುರಾಣ..
.

RELATED ARTICLES  ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ.

ಕಣಾದ ಎಂಬ ಋಷಿ ಏಕಪಾದದಲ್ಲಿ ನಿಂತು ನೀರಿಗಾಗಿ ತಪಸ್ಸು ಮಾಡಿದ. ಅವನ ತಪೋಶಕ್ತಿಯಿಂದ ಶಿವನ ಜಟೆಯಲ್ಲಿದ್ದ ನೀರು ಭೂಮಿಗೆ ಹರಿದು ಬಂತು. ಅದನ್ನು ಕಂಡ ಮುನಿಗಳು ‘ಶಿವಗಂಗಾ’ ಎಂದರು. ಅದೇ ಶಿವಗಂಗೆ ಕ್ಷೇತ್ರ ಆಗಿದೆ ಎಂದು ಸ್ಥಳ ಪುರಾಣ ಹೇಳುತ್ತದೆ.