ಶಿರಸಿ: ತಾಲೂಕಿನ ಬಿಸಲಕೊಪ್ಪ ಭಾಗದ ಕಿರಾಣಿ ಅಂಗಡಿ ಹಾಗೂ ಹೊಟೆಲ್‌ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಜೋರಾಗಿದ್ದು, ತಕ್ಷಣವೇ ಮದ್ಯ ಮಾರಾಟವನ್ನು ತಡೆಯುವಂತೆ ಎಕ್ಕಂಬಿ ಭಾಗದ ಮಹಿಳೆಯರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ಬುಧವಾರ ತಹಶಿಲ್ದಾರರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಅವರು, ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಸಲಕೊಪ್ಪ ಮತ್ತು ಎಕ್ಕಂಬಿಯಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಕಿರಾಣಿ ಅಂಗಡಿ ಹಾಗೂ ಹೊಟೆಲ್‌ಗಳಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎಂದು 80 ಜನ ಮಹಿಳೆಯರು ಸಹಿ ಹಾಕಿದ ಮನವಿ ಹಾಗೂ ವಿಡಿಯೋ ಸಾಕ್ಷಿ ಸಹಿತವಾಗಿ ಆರೋಪಿಸಿದ್ದಾರೆ.
ಬಿಸಲಕೊಪ್ಪ ಹಾಗೂ ಎಕ್ಕಂಬಿ ಭಾಗದಲ್ಲಿ ಸುಮಾರು 10 ಕ್ಕಿಂತ ಹೆಚ್ಚು ಅಂಗಡಿ ಹಾಗೂ ಹೊಟೆಲ್ ಗಳಲ್ಲಿ ಕಳೆದ 10 ವರ್ಷಗಳಿಂದ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ,ಇದರಿಂದ ಹೈಸ್ಕೂಲ್ ಕಾಲೇಜ್ ಗೆ ಹೋಗುವಂತ ಮಕ್ಕಳು ಕೂಡಾ ಮದ್ಯ ವ್ಯಸನಿಗಳಾಗಿದ್ದಾರೆ, ವಯಸ್ಕರು ಕೆಲಸ ಕಾರ್ಯ ಬಿಟ್ಟು ದಿನಪೂರ್ತಿ ಮದ್ಯ ಮಾರಾಟ ಅಂಗಡಿಗಳಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಈ ಬಗ್ಗೆ ಅಂಗಡಿ ಮಾಲಿಕರನ್ನು ಕೇಳಿದರೆ ತಾವು ಪೋಲಿಸರಿಗೆ 30-40 ಸಾವಿರ ರೂಪಾಯಿ ಹಪ್ತ ಕೊಟ್ಟು ದಂದೆ ನಡೆಸುತ್ತಿದ್ದೆವೆ ಇದನ್ನು ಕೇಳಲು ನೀವ್ಯಾರು ಎಂಬ ಉದ್ಧಟತನದ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಗ್ರಾಮದ ಮಹಿಳೆ ಕಾರ್ಮಿಲಿನ್ ಫರ್ನಾಂಡೀಸ್ ಆರೋಪಿಸಿದರು.

RELATED ARTICLES  ನಗ್ನವಾಗಿ ಓಡಾಡಿ ಮುಜುಗರ ಉಂಟುಮಾಡುತ್ತಿದ್ದ ಮಾನಸಿಕ ಅಸ್ವಸ್ಥ : ಮಾನವೀಯತೆ ಮೆರೆದ ಪೊಲೀಸರು.


ಈ ಕುರಿತು ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ,ಹಾಗೂ ಪೋಲಿಸರಿಗೆ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಯಾವುದೇ ಕ್ರಮವಾಗಿಲ್ಲ, ಹಾಗಾಗಿ ತಕ್ಷಣವೇ ಅನಧಿಕೃತ ಮದ್ಯ ಮಾರಾಟವನ್ನು ನಿಲ್ಲಿಸಿ, ಸ್ವಸ್ಥ ಸಮಾಜಕ್ಕೆ ಸಹಕರಿಸಬೇಕೆಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಾಗೂ ತಹಶಿಲ್ದಾರರಿಗೆ ಮನವಿ ಒಪ್ಪಿಸಿದರು.
ತಹಶಿಲ್ದಾರ ಶ್ರೀಧರ ಮುಂದಲಮನಿ ಮನವಿ ಸ್ವೀಕರಿಸಿ ಮಾತನಾಡಿ, ಅನಧಿಕೃತವಾಗಿ ಮದ್ಯ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಬಿಸಲಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವ ಯಾವ ಅಂಗಡಿ ಹಾಗೂ ಹೊಟೆಲ್ ಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಹೆಸರು ಸಹಿತವಾಗಿ ಆ ಭಾಗದ ಮಹಿಳೆಯರು ತಿಳಿಸಿದ್ದಾರೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

RELATED ARTICLES  ಡಿಸೆಂಬರ್ 31 ರಂದು ಈ ಫೋನ್ ಗಳಲ್ಲಿ WhatsApp ಕಾರ್ಯ ನಿರ್ವಹಿಸುವುದಿಲ್ಲ?


ಈ ವೇಳೆ ಎಕ್ಕಂಬಿ ಭಾಗದ ವೀಣಾ ನಾಯ್ಕ, ಸುಬ್ಬಿ ನಾಯ್ಕ, ಸುಮಿತ್ರಾ ಕತ್ತೆರ್, ನಾಗರತ್ನ ಪೂಜಾರಿ, ರೇಖಾ ಠಾಕೂರ್ ಮತ್ತು ಶಾರದಾ ನಾಯ್ಕ ಹಾಜರಿದ್ದರು.