ಬೆಂಗಳೂರು: ನಾಳೆ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಕಾರ್ಯಕ್ರಮಗಳ ನಿಮಿತ್ತ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಗರದ ವಿವಿಧ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ನಾಳೆ ವಾಹನ ಸವಾರರಾದ ನೀವು ಈ ಕೆಲ ರಸ್ತೆಗಳಲ್ಲಿ ಸಂಚರಿಸೋದನ್ನು ತಪ್ಪಿಸಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸುವುದು ಒಳಿತು.
ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ಡಾ.ಬಿಆರ್ ರವಿಕಾಂತೇ ಗೌಡ ಅವರು, ದಿ: 11.11.2022 ರಂದು ಮಾನ್ಯ ಪ್ರಧಾನ ಮಂತ್ರಿಗಳು, ಭಾರತ ಸರ್ಕಾರ ರವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರ, ಮಾನ್ಯ ಪ್ರಧಾನ ಮಂತ್ರಿಗಳ ಸಂಚಾರ ಹಾಗೂ ಭದ್ರತಾ ದೃಷ್ಟಿಯಿಂದ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
ಮೇಲೆ ಸೂಚಿಸಿದ ಮಾರ್ಗಗಳಲ್ಲಿ ಬೆಳ್ಳಿಗೆ 08:00 ಗಂಟೆಯಿಂದ ಮದ್ಯಾಹ್ನ 02:00 ಗಂಟೆಯವರೆಗೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಕೆಳಕಂಡ ರಸ್ತೆಗಳನ್ನು ಬಳಸದೇ ಸಂಚಾರ ಪೊಲೀಸರೊಂದಿಗೆ ಸಹಕರಿಸಲು ಕೋರಿದ್ದಾರೆ.
ಅಂದಹಾಗೆ ನಾಳೆ ಬೆಳಿಗ್ಗೆ 8 ಗಂಟೆಯಿಂದ 2 ಗಂಟೆಯವರೆಗೆ ಬೆಂಗಳೂರಿನ ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಇದಲ್ಲದೇ ಏರ್ ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಮಹಾರಾಣಿ ಬ್ರಿಡ್ಜ್ ನಿಂದ ರೈಲ್ವೆ ಸ್ಟೇಷನ್ ಪ್ರವೇಶದ್ವಾರದವರೆಗೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೆಜಿ ರಸ್ತೆಯಲ್ಲಿ ಶಾಂತಲಾ ಜಂಕ್ಷನ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ, ವಾಟಾಳ್ ನಾಗರಾಜ್ ರಸ್ತೆಯಲ್ಲಿ ಕೋಡೆ ಅಂಡರ್ ಪಾಸ್ ನಿಂದ ಪಿಎಫ್ ವರೆಗೆ, ಇಂಟರ್ ನ್ಯಾಷನಲ್ ಏರ್ ಪೋರ್ಟ್ ನ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸವಾರರ ಸಂಚಾರಕ್ಕೆ ಪ್ರಧಾನಿ ಮೋದಿ ಸಂಚಾರದ ಹಿನ್ನಲೆಯಲ್ಲಿ ನಿರ್ಬಂಧಿಸಲಾಗಿದೆ.