ಶಿರಸಿ: ರಾಜ್ಯ ಸರಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ಸಾಹಸಮಯ ಪ್ರದರ್ಶನ ತೋರಿದ ಮಕ್ಕಳಿಗೆ ಕೊಡಮಾಡುವ ರಾಜ್ಯ ಮಟ್ಟದ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯು ಈ ಬಾರಿ ಸಿದ್ದಾಪುರ ತಾಲೂಕಿನ ಕಾನಸೂರಿನ 11 ವರ್ಷದ ಕೌಶಲ್ಯ ಹೆಗಡೆಗೆ ಘೋಷಣೆಯಾಗಿದೆ. 2021ರ ಮಾರ್ಚ್ 15ರಂದು ತನ್ನ ತಂದೆಯೊಂದಿಗೆ ಮಾವಿನಗುಂಡಿ ಸಮೀಪದ ಹಳ್ಳಿಯೊಂದರಲ್ಲಿ ಮಂಗಲ ಕಾರ್ಯಕ್ಕಾಗಿ ಅಡುಗೆ ಮಾಡಲು ಹೊರಟಿದ್ದ ತಂದೆ ವೆಂಕಟರಮಣ ಹೆಗಡೆ ಅವರು ಚಲಾಯಿಸುತ್ತಿದ್ದ ಜೀಪು ಆಕಸ್ಮಿಕವಾಗಿ ಪಲ್ಟಿ ಹೊಡೆದು ಜೀಪಿನ ಅಡಿಯಲ್ಲಿ ತಂದೆ ವೆಂಕಟರಮಣ ಹೆಗಡೆ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಜೀಪಿನಲ್ಲಿದ್ದ ಕೌಶಲ್ಯ ಹೆಗಡೆ ಹಾಗೂ ಆಕೆಯ ಐದು ವರ್ಷದ ತಮ್ಮ, ತಂದೆಯನ್ನು ಬದುಕಿಸಲು ಹರಸಾಹವನ್ನುಪಟ್ಟರು.
ಇದೇ ವೇಳೆಯಲ್ಲಿ ಸಮಯ ಪ್ರಜ್ಞೆ ತೋರಿದ ಕೌಶಲ್ಯ ಹೆಗಡೆ ಘಟನೆ ನಡೆದ ಸ್ಥಳದಿಂದ ಸುಮಾರು ಎರಡು ಕಿಲೋ ಮೀಟರ್ ದೂರ ಓಡಿ ಹೋಗಿ ಅಲ್ಲಿಂದ ಜನರನ್ನು ಕರೆತಂದು ಜೀಪನ್ನು ಎತ್ತಿಸಿ ತಂದೆಯ ಜೀವವನ್ನು ಉಳಿಸಿದ್ದಳು.
ಕೌಶಲ್ಯ ಹೆಗಡೆ ಕಾನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಾಳೆ. ಬಾಲಕಿ ತನ್ನ ಸಣ್ಣ ವಯಸ್ಸಿನಲ್ಲಿಯೇ ಈ ರೀತಿಯ ಸಮಯಪ್ರಜ್ಞೆಯನ್ನು ತೋರಿ ತನ್ನ ತಂದೆಯನ್ನು ಬದುಕಿಸಿದ ಸಾಹಸವನ್ನು ನೋಡಿ ರಾಜ್ಯ ಸರ್ಕಾರ ನವೆಂಬರ್ 14ರಂದು ನಡೆಯಲಿರುವ ಮಕ್ಕಳ ದಿನಾಚರಣೆಯಲ್ಲಿ ಈಕೆಗೆ ರಾಜ್ಯ ಮಟ್ಟದ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡುತ್ತಿದೆ.