ಶಿರಸಿ: ನಮ್ಮ ಹಿಂದೂ ಧರ್ಮಗ್ರಂಥದ ಪರಿಚಯವನ್ನು ನಮ್ಮವರಿಗೆ ಮಾಡುವ ಉದ್ಧೇಶದಿಂದ ಭಗವದ್ಗೀತಾ ಅಭಿಯಾನ ಎಲ್ಲೆಡೆ ಆರಂಭಿಸಲಾಗಿದೆ. ಪ್ರತಿಯೊಬ್ಬರೂ ಕನಿಷ್ಟ ದಿನಕ್ಕೊಂದು ಭಗವದ್ಗೀತೆ ಶ್ಲೋಕವನ್ನು ಪಠಿಸಬೇಕು ಎಂದು ಸ್ವರ್ಣವಲ್ಲೀ ಶ್ರೀ ನುಡಿದರು. ಅವರು ತಾಲೂಕಿನ ದೇವನಳ್ಳಿಯಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಅವರು ಆಶೀರ್ವದಿಸಿದರು. ಪ್ರಸ್ತುತ ಹಿಂದೂ ಸಮಾಜದಲ್ಲಿ ಮೂರು ಸಮಸ್ಯೆಗಳಿವೆ. ಮಕ್ಕಳಿಗೆ ತಡವಾಗಿ ವಿವಾಹ ಮಾಡುತ್ತಿರುವುದು, ವಿವಾಹ ವಿಚ್ಛೇದನ ಹೆಚ್ಚುತ್ತಿರುವುದು ಹಾಗು ವಿವಾಹದ ವಿಷಯದಲ್ಲಿ ಹಿಂದೂ ಸಮಾಜಕ್ಕೆ ಒಂದು ಕಾನೂನು, ಇನ್ನೊಂದು ಸಮಾಜಕ್ಕೆ ಬೇರೆಯದೇ ಕಾನೂನು ಎಂಬುದು ದೇಶದಲ್ಲಿ ಇರುವುದು ದೌರ್ಭಾಗ್ಯವಾಗಿದೆ ಎಂದರು.

ಹಿಂದೂಸ್ಥಾನದಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಷಯ. ನಮ್ಮ ದೇಶದ ಎಷ್ಟೋ ಕೋಟಿ ಹಿಂದುಗಳಿಗೆ ನಮ್ಮ ಧರ್ಮಗ್ರಂಥ ಭಗವದ್ಗೀತೆ ತಿಳಿದಿಲ್ಲ. ಹಿಂದೂ ಸಮಾಜದಲ್ಲಿ ಐಕ್ಯ ಭಾವನೆ ಮೊದಲು ಜಾಗೃತಗೊಳ್ಳಲಿ. ಹಿಂದೂ ಸಾಮ್ರಾಜ್ಯದ ಅಜರಾಮರ ಸಾಮ್ರಾಟ್ ಶಿವಾಜಿ ಮಹಾರಾಜರಾಗಿದ್ದಾರೆ. ಹಿಂದು ಜಾಗೃತಿಯಾದಲ್ಲಿ ಭಾರತ ಜಗದ್ಗುರುವಾಗುತ್ತದೆ ಎಂದು ಅವರು ನುಡಿದರು.

ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಭಾರತ ಮತ್ತು ಹಿಂದೂ ಧರ್ಮ ಅಭಿನ್ನ. ಅದೆಂದಿಗೂ ವಿಭಿನ್ನವಾಗಲು ಸಾಧ್ಯವಿಲ್ಲ. ಹಿಂದೂ ಧರ್ಮವೆನ್ನುವುದು ಮೂಲವಿಜ್ಞಾನ. ಉಳಿದೆಲ್ಲವುಗಳೂ ಅನ್ವೇಷಣೆಗಳಾಗಿವೆ. ಓಂಕಾರದಲ್ಲಿ ನಂಬಿಕೆ ಇಟ್ಟವರೆಲ್ಲರೂ ಹಿಂದುಗಳಾಗಿದ್ದಾರೆ ಎಂದು ಹೇಳಿದರು.

RELATED ARTICLES  ಉತ್ತರ ಕನ್ನಡದಲ್ಲಿ ಕೊರೋನಾ ಆರ್ಭಟ : ಈವರೆಗಿನ ಅತಿಹೆಚ್ಚು ಪ್ರಕರಣ ದಾಖಲು.

ಈ ಕೆಳಗಿನ ಸುದ್ದಿಗಳನ್ನೂ ಓದಿ….

ಅಂಡಗಿಯ ನಾಮಧಾರಿ ಗುರುಮಠದ ಶ್ರೀ ಕಲ್ಯಾಣ ಸ್ವಾಮಿಗಳು ಆಶೀರ್ವದಿಸಿ ಹರ ಮುನಿದರೆ ಗುರು ಕಾಯ್ವ ಎಂಬ ಮಾತಿನಂತೆ ಗುರು ಸೇವೆಯನ್ನು ಭಕ್ತರು ಸದಾ ಮಾಡುತ್ತಿರಬೇಕು. ಗುರು ಸೇವೆಯ ಅವಕಾಶ ಎಲ್ಲ ಭಕ್ತರಿಗೆ ದೊರೆಯಲಿ ಎಂದರು.

ಶ್ರೀಕ್ಷೇತ್ರ ಮಂಜುಗುಣಿಯ ಅರ್ಚಕರಾದ ಶ್ರೀನಿವಾಸ ಭಟ್ಟ ಮಾತನಾಡಿ, ಪ್ರತಿಯೊಬ್ಬರಿಗೂ ನಾವು ಯಾರೆಂಬುದನ್ನು ತಿಳಿದುಕೊಂಡು ಬದುಕಬೇಕು. ನಮ್ಮ ತನವನ್ನು ಮರೆತ ಕಾರಣಕ್ಕೆ ನಮ್ಮ ಸಂಸ್ಕೃತಿ ನಾಶವಾಯಿತು. ಹಿಂದಿನ ಆಲೋಚನೆಯನ್ನು ಮಾಡುವುದರ ಮೂಲಕ ಮುಂದಿನ ಸಮಾಜಕ್ಕೆ ನಾನೇನು ನೀಡಬಹುದು ಎಂಬುದನ್ನು ತಿಳಿದು ಬದುಕಬೇಕು ಎಂದು ಅವರು ಹೇಳಿದರು.

ಬಣ್ಣದಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಆಶೀರ್ವದಿಸಿ ಇಂದು ನಮ್ಮನ್ನು ನಾವು ಮರೆಯುತ್ತಿದ್ದೇವೆ. ನಮ್ಮ ಜೊತೆಗಿರುವವರನ್ನೇ ಇವನಾರವ ಎಂದುಕೊಳ್ಳದೇ ಇವ ನಮ್ಮವ ಎಂದು ತಿಳಿದುಕೊಂಡು ನಾವೆಲ್ಲ ಒಂದೇ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕಿದೆ. ಹಿಂದು ಧರ್ಮದ ಉಳಿವು ತಾಯಂದಿರಿಂದ ಮಾತ್ರ ಸಾಧ್ಯ. ಶಿಕ್ಷಣದಿಂದ ಧರ್ಮ ಅವನತಿಯತ್ತ ಸಾಗುತ್ತಿದೆ. ನೀತಿ ಇಲ್ಲದ ಶಿಕ್ಷಣ, ಭೀತಿ ಇಲ್ಲದ ಶಾಸನ, ನೈತಿಕವಿಲ್ಲದ ಧರ್ಮ ನಿರುಪಯೋಗ. ಸಪ್ತ ಸಾಗರದ ಮಧ್ಯದಲ್ಲಿ ನೆಲೆಸಿರುವ ಎಲ್ಲರೂ ಹಿಂದುಗಳೇ. ಜಾತಿಯಿಂದ ಯಾರೂ ದೊಡ್ಡವರಾಗಿಲ್ಲ. ನೀತಿಯಿಂದ ಮಾದರಿಯಾಗಿದ್ದಾರೆ. ಎಲ್ಲರೂ ಭಾರತೀಯರೇ ಆಗಿದ್ದಾರೆ ಎಂದು ಅವರು ನುಡಿದರು.

RELATED ARTICLES  ಶಾಲೆಗೆ ಹೋಗಿ ಬರುತ್ತೇನೆ ಎಂದು ಹೋದವಳು ನಾಪತ್ತೆ : ಭಟ್ಕಳದಲ್ಲಿ ದಾಖಲಾಯ್ತು ಪ್ರಕರಣ

ಪ್ರಮುಖ ಸುದ್ದಿಗಳನ್ನು ಓದಲು ಸುದ್ದಿಯನ್ನು ಕ್ಲಿಕ್ಕಿಸಿ.

ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸುರೇಶ್ಚಂದ್ರ ಕೆಶಿನ್ಮನೆ, ಅರಣ್ಯ ಹಕ್ಕು ಹೋರಾಟಗಾರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿರಸಿ ಗ್ರಾಮಾಂತರ ಕಾರ್ಯವಾಹ ಶ್ರೀಧರ ತೆಂಗಿನಗದ್ದೆ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೆಂಕಟ್ರಮಣ ಕೆಳಾಸೆ ವಂದಿಸಿದರು. ವೇದಿಕೆಯಲ್ಲಿ ಹಿಂದೂ ಸಮಾಜೋತ್ಸವ ಸಮಿತಿ ಸಂಚಾಲಕ ಕೇಶವ ಮರಾಠೆ ಮಂಜುಗುಣಿ ಹಾಗು ವಿವಿಧ ಸಮಾಜದ ಪ್ರಮುಖರು ಇದ್ದರು‌.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಸಾವಿರಾರು ಜನರಿಂದ ವಿವಿಧ ಕಲಾ ತಂಡಗಳ ಜೊತೆಗೆ ಭವ್ಯ ಶೋಭಾಯಾತ್ರೆ ನಡೆಯಲ್ಪಟ್ಟಿತು.