ಬೆಂಗಳೂರು : ವಿಧಾನಸಭಾ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಈ ನೆಲೆಯಲ್ಲಿ ಪಕ್ಷದ ಚಟುವಟಿಕೆಗಳು ಚುರುಕುಗೊಂಡಿದ್ದು, ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷದ ನಾಯಕರು ಯೋಜನೆ ಪ್ರಾರಂಭಿಸಿದ್ದಾರೆ. ಇದರಂತೆ ಕೆ.ಪಿ.ಸಿ. ಸಿ 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರ್ಮ್ ಬಗ್ಗೆ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ರಾಜ್ಯಾದ್ಯಂತ ಹಲವು ಆಕಾಂಕ್ಷಿಗಳು ಕೆಪಿಸಿಸಿ ಕಛೇರಿಗೆ ಆಗಮಿಸಿ ಅರ್ಜಿ ಸಲ್ಲಿಸುತ್ತಿದ್ದಾರೆ.
ಇಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಉತ್ತರ ಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಭಾಸ್ಕರ ಪಟಗಾರ ಅರ್ಜಿ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನಿಂದ ಗುರ್ತಿಸಿಕೊಂಡು ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಅನೇಕ ವರ್ಷಗಳಿಂದ ಪಕ್ಷ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡ ಶಿವಾನಂದ ಹೆಗಡೆ ಕಟತೋಕಾ ಅವರು. ಈ ಬಾರಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು, ಪಕ್ಷ ತನ್ನ ಕಾರ್ಯವನ್ನು ಗುರುತಿಸಿ ಅವಕಾಶ ಮಾಡಿಕೊಟ್ಟರೆ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ನಾಗಭೂಷಣ, ಎಲ್ ಎನ್ ಭಟ್, ಉದ್ಯಮಿ ನಾಗರಾಜ ಭಟ್ಟ, ದತ್ತಾತ್ರೇಯ ಶೆಟ್ಟಿ, ಬಾಲು ಭಂಡಾರಿ, ಕುಮಾರಿ ನೇಹಾ ಹೆಗಡೆ ಮತ್ತು ನಾಗರಾಜ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು.