ಚಿಕ್ಕಮಗಳೂರು: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ತಾವು ಸೇರಿದಂತೆ 25 ಪ್ರಖರ ಹಿಂದುತ್ವವಾದಿಗಳು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂದು ಬಲಪಂಥೀಯ ಸಂಘಟನೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್ ಅವರು, ಹಿಂದೂಗಳ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸಮುದಾಯ ಮತ್ತು ಹಿಂದುತ್ವವನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
“ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಹೊರತುಪಡಿಸಿ, ಹಿಂದುತ್ವವನ್ನು ರಕ್ಷಿಸಲು ಬೇರೆಯವರು ಕೆಲಸ ಮಾಡುವುದನ್ನು ಅಥವಾ ಆಡಳಿತ ನಡೆಸುವುದನ್ನು ನಾವು ನೋಡಲು ಸಾಧ್ಯವಿಲ್ಲ. ಹಿಂದೂಗಳ ಪರಿಶ್ರಮದಿಂದ ಕರ್ನಾಟಕದಲ್ಲಿ ಗೆದ್ದ ಬಿಜೆಪಿಗೆ ಹಿಂದೂಗಳು ಮತ್ತು ಹಿಂದೂ ಕಾರ್ಯಕರ್ತರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮುತಾಲಿಕ್ ವಾಗ್ದಾಳಿ ನಡೆಸಿದರು.
……. ಇದನ್ನೂ ಓದಿ ….
ಇಂದಿಗೂ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣಗಳು ದಾಖಲಾಗುತ್ತಿದ್ದು, ರೌಡಿ ಶೀಟ್‌ನಲ್ಲಿ ಹೆಸರು ಸೇರಿಸಲಾಗುತ್ತಿದೆ. ಬಿಜೆಪಿ ಸರ್ಕಾರ ಇದ್ದರೂ ಹಿಂದೂಗಳ ಬಗ್ಗೆ ಕರುಣೆ ತೋರಿಲ್ಲ. ಅನೇಕ ಹಿಂದೂ ಕಾರ್ಯಕರ್ತರ ಹತ್ಯೆಗಳೂ ನಡೆದಿವೆ ಎಂದರು.