ಭಟ್ಕಳ: ನಗರ ಠಾಣಾ ವ್ಯಾಪ್ತಿಯ ರಾಷ್ಟಿಯ ಹೆದ್ದಾರಿ ೬೬ರ ಶಂಶುದ್ಧೀನ್ ಸರ್ಕಲ್ ಹತ್ತಿರ ರಸ್ತೆ ದಾಟುತ್ತಿರುವಾಗ ಕಾರು ಡಿಕ್ಕಿಯಾಗಿ ಬಿದ್ದ ಯುವತಿಯ ಮೇಲೆ ಲಾರಿ ಹರಿದು ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತ ಪಟ್ಟ ಘಟನೆ ರವಿವಾರ ರಾತ್ರಿ ಸಂಭವಿಸಿದೆ. ಈ ಘಟನೆ ಮತ್ತೊಮ್ಮೆ ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಯ ಕುರಿತಾದ ಸಾಮಾಜಿಕ ಜಾಲತಾಣದ ಮಾತುಗಳಿಗೆ ಕಾರಣವಾಗಿದೆ.
ಮೃತ ಬಾಲಕಿಯನ್ನು ಆಯಿಶಾ ನಿಜಾ ತಂದೆ ಮೊಹಮ್ಮದ್ ಇಲ್ಯಾಸ್ ಶೇಖ್ (15) ಎಂದು ಗುರುತಿಸಲಾಗಿದೆ. ಈಕೆಯು ತಮ್ಮ ಮನೆಯವರು ಹಾಗೂ ಪಕ್ಕದ ಮನೆಯವರೊಂದಿಗೆ ಭಟ್ಕಳದಲ್ಲಿ ನಡೆಯುತ್ತಿರುವ ಅಮ್ಯೂಸ್‌ಮೆಂಟ್ ಪಾರ್ಕಗೆ ಹೋಗುವುದಕ್ಕೆ ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ಕಾರೊಂದು ಈಕೆಗೆ ಬಡಿದು ಈಕೆ ರಸ್ತೆಗೆ ಬಿದ್ದ ಸಂದರ್ಭದಲ್ಲಿಯೇ ವೇಗವಾಗಿ ಬಂದ ಲಾರಿಯ ಚಕ್ರ ಕಾಲು ಮತ್ತು ಕೈ ಮೇಲೆ ಹೋಗಿದ್ದರಿಂದ ತೀವ್ರ ಗಾಯಗೊಂಡಿದ್ದಳು.
ತಕ್ಷಣ ಇವಳನ್ನು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರು ಖಾಸಗೀ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮೃತ ಪಟ್ಟಳೆನ್ನಲಾಗಿದೆ.
ಈಕೆಯೊಂದಿಗೆ ಇದ್ದ ಖಮರುನ್ನಿಸಾ ಇಮಾಮ್ ಸಾಬ್ ಈಕೆಗೂ ಗಂಭೀರ ಗಾಯಗಳಾಗಿದ್ದು, ಕುಂದಾಪುರ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಕಾರು ಮತ್ತು ಲಾರಿ ಸ್ಥಳದಿಂದ ಪರಾರಿಯಾಗಿತ್ತು, ಆದರೆ, ಘಟನೆ ತಿಳಿದ ತಕ್ಷಣ ನಗರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕಾರು ಮತ್ತು ಲಾರಿ ಬೆನ್ನಟ್ಟಿ ಇಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳಾದ ಕಾರು ಚಾಲಕ ಹಾಗೂ ಲಾರಿಯ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡು ನಗರ ಠಾಣೆಯ ಪೊಲಿಸರು ತನಿಖೆ ನಡೆಸುತ್ತಿದ್ದಾರೆ