ಭಟ್ಕಳ – ಗೋವಾ ಕನ್ನಡಿಗರ ಸಂಘ ಹಾಗೂ ಸಮಾಜಮುಖಿ ಸೇವಾ ಸಂಸ್ಥೆ ಕರ್ನಾಟಕ(ರಿ) ಇವರು ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ನ್ಯಾಷನಲ್ ಐಕಾನ್ ಅವಾರ್ಡ್ ೨೦೨೨ ಪ್ರಶಸ್ತಿಗೆ ಸಾಹಿತಿ ಕವಿ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರ ಹೆಸರು ಘೋಷಣೆಯಾಗಿರುತ್ತದೆ. ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿ ೨೦೦೩ ರಿಂದ ಇದುವರೆಗೆ ಮೌನಗೀತೆ,ಭಾವಸುಮ, ಕರುನಾಡ ಕುಡಿಗಳು ಹಾಗೂ ನಾನೂ ಶಿಲ್ಪವಾಗಬೇಕು ಎಂಬ ನಾಲ್ಕು ಕವನ ಸಂಕಲನ ಗಳನ್ನು, ಬೆಂಕಿಬಿದ್ದಿದೆ ಹೊಳೆಗೆ ಮಕ್ಕಳ ಕಥಾ ಸಂಕಲನ, “ಉತ್ತರಕನ್ನಡಕ್ಕೆ ಒಂದು ಸುತ್ತು” ಎನ್ನುವ ಪ್ರವಾಸಿ ಲೇಖನಗಳ ಸಂಕಲನ ಹಾಗೂ ” ಮಾತಾ ಮಹಿಮ” (ಮರುಮುದ್ರಣ ಗೊಂಡಿದೆ)ಅಳ್ವೆಕೋಡಿ ದೇವಾಲಯ ಚರಿತ್ರೆ ಪುಸ್ತಕಗಳನ್ನು ,ಹನುಮಾಮೃತ ಎನ್ನುವ ಸಂಪಾದಿತ ಪುಸ್ತಕಗಳನ್ನು ಹೊರ ತಂದಿರುತ್ತಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕ್ಷೇತ್ರತಜ್ಞರಾಗಿ ಕರ್ನಾಟಕ ಗ್ರಾಮಚರಿತ್ರೆಕೋಶ ರಚನೆಯಲ್ಲಿ ಕೊಡುಗೆ ನೀಡಿರುತ್ತಾರೆ.

ಜೊತೆಗೆ ಭರವಸೆಯ ಛಾಯೆ ಎಂಬ ಧ್ವನಿಸುರುಳಿಯನ್ನು ೨೦೧೧ ರಲ್ಲಿಯೇ ನಾಡೋಜ ಪಾಟಿಲ್ ಪುಟ್ಟಪ್ಪ ನವರ ಅಮೃತ ಹಸ್ತದಲ್ಲಿ ಬಿಡುಗಡೆ ಗೊಳಿಸಿರುವುದು ವಿಶೇಷವಾಗಿದ್ದು , ಇತ್ತೀಚಿಗೆ ಕೆಲವು ಸ್ವರಚಿತ ಭಾವಗೀತೆಗಳು ಹಿರಿಕಿರಿಯ ಕವಿಗಳ ಗೀತೆಗಳನ್ನು, ಭಕ್ತಿಗೀತೆಗಳ ಅಲ್ಬಂ ಗಳನ್ನು ಹೊರತರುವ ಮೂಲಕ ಯೂಟ್ಯೂಬ್ ವೀಕ್ಷಕರ ಮೆಚ್ಚುಗೆ ಗಳಿಸಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರದ ಹಲವು ಯೋಜನೆಗಳ ಯಶಸ್ಸಿ ಅನುಷ್ಠಾನದಲ್ಲಿ ಮಾಹಿತಿ ಸಂವಹನದ ಸಾಹಿತ್ಯ ,ಗೀತೆಗಳ ರಚನೆಯಲ್ಲಿಯೂ ತೊಡಗಿಕೊಂಡಿರುತ್ತಾರೆ.

RELATED ARTICLES  ಗೋಕರ್ಣದ ಅಭಿವೃದ್ಧಿಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆರ್.ವಿ.ಡಿ.


ರಾಜ್ಯದ ಅನೇಕ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕವಿಗೋಷ್ಠಿ, ಸುಗಮಸಂಗೀತ ಹಾಗೂ ಅನೇಕ ಕಲಿಕಾ ಕಮ್ಮಟಗಳಲ್ಲಿಯೂ ಸದಾ ತೊಡಗಿಸಿಕೊಳ್ಳುತ್ತಿದ್ದು ಇವರಿಗೆ ಕರ್ನಾಟಕ ಸರಕಾರದ ಜಿಲ್ಲಾ ಯುವ ಪ್ರಶಸ್ತಿ ಸೇರಿದಂತೆ,ಕರ್ನಾಟಕ ಸಾಹಿತ್ಯ ರತ್ನ, ಕಲಾಶ್ರೀ,ಬಸವ ಚೇತನ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ಕರುನಾಡ ಸಾಧಕ ರತ್ನ ಹೀಗೆ ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳು ಬಂದಿದ್ದು ಭಟ್ಕಳ ತಾಲೂಕಿನ ೮ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಸಹ ಬಂದಿರುತ್ತದೆ.


ಇವರ ಸುದೀರ್ಘ ಸಾಹಿತ್ಯ ಸಂಗೀತ ಕಲಾ ಸೇವೆಗಳನ್ನು ಪರಿಗಣಿಸಿದ ಗೋವಾ ಕನ್ನಡಿಗರ ಸಂಘ ಹಾಗೂ ಸಮಾಜಮುಖಿ ಸೇವಾ ಸಂಸ್ಥೆ ಕರ್ನಾಟಕ ಇವರು ಜಂಟಿಯಾಗಿ ೨೦೨೨ನೇ ನ್ಯಾಷನಲ್ ಐಕಾನ್ ಅವಾರ್ಡ್ ನೀಡಿ ಗೌರವಿಸುತ್ತಿದೆ.

RELATED ARTICLES  ಡಾ. ವಿನಾಯಕ ಹೆಗಡೆಯವರಿಗೆ ರಾಷ್ಟ್ರೀಯ ದ್ರೋಣ ರತ್ನ ಅವಾರ್ಡ 2022

ಈ ಸುದ್ದಿಗಳನ್ನೂ ಓದಿ.


ಜೊತೆಗೆ ಇವರೊಂದಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೂ ಇದೇ ಸಂದರ್ಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಗೋವಾ ಕನ್ನಡಿಗರ ಸಂಘದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇದೇ ನವೆಂಬರ್ ೨೭ ರವಿವಾರದಂದು ಗೋವಾ ರಾಜ್ಯದ ಪಣಜಿಯ ಮಿರಾಮರ್ ಬೀಚ್ ಹತ್ತಿರದ ಸೊಲ್ಮಾರ್ ಹೊಟೆಲ್ ನಲ್ಲಿ‌ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅಂದು ನಡೆಯುವ ಕರ್ನಾಟಕ ರಾಜ್ಯೋತ್ಸವ ಗತವೈಭವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಸಾಧಕರೊಂದಿಗೆ ಉಮೇಶ ಮುಂಡಳ್ಳಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.