ಕಾರವಾರ: ಪರೇಶ್ ಮೇಸ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಬಿ.ಐ ನಿಂದ ‘ಬಿ’ ರಿಪೋರ್ಟ್ ಸಲ್ಲಿಕೆ ಬಳಿಕ ನ್ಯಾಯಾಲಯದಿಂದ ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾಗೆ ನೋಟೀಸ್ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪರೇಶ್ ಮೇಸ್ತಾ ಕುಟುಂಬದ ಪರವಾಗಿ ಕಾನೂನು ಹೋರಾಟಕ್ಕೆ ವಕೀಲ ನಾಗರಾಜ ನಾಯಕ್ ನಿಂತಿದ್ದಾರೆ. ಅವರ ಪರವಾಗಿ ವಕಾಲತ್ತು ನಡೆಸುವುದಾಗಿ ನ್ಯಾಯಾಲಯದಲ್ಲಿ ವಕೀಲ ನಾಗರಾಜ ನಾಯಕ್ ತಿಳಿಸಿದ್ದಾರೆ. ಸದ್ಯ ಸಿ.ಬಿ.ಐ.ನಿಂದ ನೀಡಲಾದ ‘ಬಿ’ ರಿಪೋರ್ಟ್‌ಗೆ ವಕೀಲರು ಆಕ್ಷೇಪ ಮಂಡಿಸಿದ್ದಾರೆ. ಈ ಕಾರಣದಿಂದ ಪ್ರಕರಣವನ್ನು ಡಿ. 21ಕ್ಕೆ ಹೊನ್ನಾವರ ಜೆಎಂಎಫ್‌ಸಿ ನ್ಯಾಯಾಲಯ ಮುಂದೂಡಿದೆ. ಸಿಬಿಐ ‘ಬಿ’ ರಿಪೋರ್ಟ್ ವಿರುದ್ಧ ಡಿ. 21ರಂದು ತಕರಾರು ಅರ್ಜಿಯನ್ನು ವಕೀಲ ನಾಗರಾಜ ನಾಯಕ್ ಸಲ್ಲಿಸಲಿದ್ದಾರೆ.
ಈ ಹಿಂದಿನ ಸಿದ್ಧರಾಮಯ್ಯ ಸರಕಾರ ಪ್ರಕರಣವನ್ನು ಸಹಜ ಸಾವು ಎಂಬಂತೆ ಬಿಂಬಿಸಲು ನಾನಾ ಪ್ರಯತ್ನ ಮಾಡಿದೆ. ಪ್ರಕರಣವನ್ನು ಎಷ್ಟು ಸಾಧ್ಯವೋ ಅಷ್ಟು ಹಳ್ಳ ಹಿಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಕರಣ ‘ಬಿ’ ರಿಪೋರ್ಟ್ ಕಾಣಬೇಕೆಂದು ಸಿಬಿಐ ವಹಿಸುವ ಮೊದಲೇ ಸಾಕಷ್ಟು ಡ್ಯಾಮೇಜ್ ಮಾಡಲಾಗಿದೆ ಎಂದು ಪ್ರಾಥಮಿಕ ನೋಟದಿಂದ ಈ ವಿಚಾರಗಳು ಕಂಡು ಬಂದಿವೆ. ಪ್ರಕರಣ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ನ್ಯಾಯ ದೊರೆಯುವ ಭರವಸೆ ಇದೆ ಎಂದು ವಕೀಲ ನಾಗರಾಜ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2017ರ ಡಿ. 6ರಂದು ನಡೆದ ಕೋಮುಗಲಭೆಯಲ್ಲಿ ಪರೇಶ್ ಮೇಸ್ತಾ ನಾಪತ್ತೆಯಾಗಿದ್ದ. ಎರಡು ದಿನಗಳ ಬಳಿಕ ಆತನ ಮೃತದೇಹ ಹೊನ್ನಾವರದ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ವಿಪಕ್ಷ ಹಾಗೂ ಜನರ ಒತ್ತಾಯದ ಮೇರೆಗೆ ಅಂದಿನ ಕಾಂಗ್ರೆಸ್ ಸರಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಆದರೆ, ಕಳೆದ ಅಕ್ಟೋಬರ್ 6 ರಂದು ನ್ಯಾಯಾಲಯಕ್ಕೆ ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿತ್ತು. ಪರೇಶ್ ಮೇಸ್ತಾ ಕೊಲೆ ನಡೆದಿಲ್ಲ, ಸಹಜ ಸಾವೆಂದು ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿತ್ತು. ಆರೋಪಿಗಳನ್ನು ದೋಷಮುಕ್ತ ಮಾಡಬಹುದೆಂದು ಸಿಬಿಐ ತನಿಖಾ ತಂಡ ‘ಬಿ’ ರಿಪೋರ್ಟ್ ಸಲ್ಲಿಸಿತ್ತು. ಈ ಹಿನ್ನೆಲೆ ಸಿಬಿಐ ರಿಪೋರ್ಟ್ ವಿರುದ್ಧ ಕಾನೂನು ಹೋರಾಟ ನಡೆಸಲು ಕಮಲಾಕರ ಮೇಸ್ತಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಈ ಸುದ್ದಿಗಳನ್ನೂ ಓದಿ
- ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.
- “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.
- ಸರಸ್ವತಿ ಪಿ.ಯು ಕಾಲೇಜಿನಲ್ಲಿ ‘ಸಂಸ್ಕಾರಧಾರೆ’ ಅರ್ಥಪೂರ್ಣ ಕಾರ್ಯಕ್ರಮ
ಇನ್ನು ಪ್ರಕರಣದ ಮರು ತನಿಖೆ ಮಾಡಿ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೇಸ್ತಾ ಹಿಂದೆ ಒತ್ತಾಯ ಮಾಡಿದ್ದರು. ಪರೇಶ್ ಮೇಸ್ತಾ ಸಾವು ಆಕಸ್ಮಿಕ ಎಂದು ಸಿಬಿಐ ಬಿ ರಿಪೋರ್ಟ್ನಲ್ಲಿ ಬಹಿರಂಗಗೊಂಡಿತ್ತು. ಈ ಹಿನ್ನೆಲೆ ಕಮಲಾಕರ ಮೆಸ್ತಾ ಪ್ರಕರಣದ ಮರು ತನಿಖೆ ನಡೆಸುವಂತೆ ಅ. 20 ರಂದು ಬೆಂಗಳೂರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಈ ಸಂಬಂಧ ಪ್ರಕರಣವನ್ನು ಮರು ತನಿಖೆ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೂಡ ಭರವಸೆ ನೀಡಿದ್ದರು. ಘಟನೆ ನಡೆದು 4 ತಿಂಗಳ ಬಳಿಕ ಸಿಬಿಐ ತನಿಖೆಗೆ ನೀಡಲಾಗಿತ್ತು. ಇದರಿಂದ ಕಮಲಾಕರ ಮೇಸ್ತಾ ಅಸಮಾಧಾನ ವ್ಯಕ್ತಪಡಿಸಿದ್ದರು. ಪರೇಶ್ ಮೇಸ್ತಾ ಕುಟುಂಬದ ಪರವಾಗಿ ನಮ್ಮ ಸರ್ಕಾರ ಇರುತ್ತೆ. ಶೀಘ್ರದಲ್ಲೇ ಮೇಸ್ತಾ ಪ್ರಕರಣ ಮರು ತನಿಖೆಗೆ ನೀಡಲಾಗುವುದು ಎಂದು ಕಾರವಾರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು.