ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಯಕ್ಷಗಾನದ ಮೇರು ಕಲಾವಿದ ಹೊನ್ನಾವರದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಉಸಿರಾಟ ತೊದರೆಯಿಂದ ಅಸ್ವಸ್ಥರಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.ನ್ಯುಮೋನಿಯಾ ಮತ್ತು ಲಘು ಪಾರ್ಶ್ವ ವಾಯು ಖಾಯಿಲೆಯಿಂದ ಬಳಲುತ್ತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಚಿಟ್ಟಾಣಿ ರಾಮಚಂದ್ರ ಹೆಗಡೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಹದಿನಾಲ್ಕರ ಹರೆಯದಲ್ಲೇ ರಂಗಸ್ಥಳ ಪ್ರವೇಶಿಸಿದ್ದ ಚಿಟ್ಟಾಣಿ ಆರಂಭದಲ್ಲಿ ಒಂದೆರಡು ವರ್ಷ ಸಾಮಾನ್ಯ ಕಲಾವಿದರಂತೆ ಸಣ್ಣ ಪುಟ್ಟ ವೇಷಗಳನ್ನು ಮಾಡಿಕೊಂಡಿದ್ದು ಬಳಿಕ ತಮ್ಮದೇ ಆದ ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಲಕ್ಷಾಂತರ ಅಭಿಮಾನಿಗಳ ಮನಗೆದ್ದರು.
84ರ ಹರೆಯದಲ್ಲೂ ಕೀಚಕನಾಗಿ, ಭಸ್ಮಾಸುರನಾಗಿ, ಕೌರವನಾಗಿ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ರಂಗದ ಮೇಲೆ ಬಂದರೆ ಸಹಸ್ರ ಸಹಸ್ರ ಸಂಖ್ಯೆಯ ಯಕ್ಷಾಭಿಮಾನಿಗಳು ಬೆಕ್ಕಸ ಬೆರಗಾಗುತ್ತಾರೆ. ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆಯೂರಿದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಶೀಘ್ರ ಗುಣಮುಖರಾಗಲಿ ಎಂಬುದು “ಸತ್ತ್ವಾಧಾರ ಬಳಗದ” ಹಾರೈಕೆ.
ಈ ಶುಭ ಹಾರೈಕೆಯೊಂದಿಗೆ ಅವರು ರಂಗದಲ್ಲಿ ಮಿಂಚುವುದಕ್ಕಿಂತ ಮೊದಲು ಚೌಕಿಯಲ್ಲಿ ಕಾಣಿಸುತ್ತಿದ್ದ ವಿಶೇಷ ವಿಡಿಯೋ ಇಲ್ಲಿದೆ…