ಮುಳ್ಳೇರಿಯಾ :ಅಸ್ತಿತ್ವಂ ಪ್ರತಿಷ್ಠಾನದ ಕಚೇರಿ ಮತ್ತು ಅದರ ನೇತೃತ್ವದ ಜನಸೇವಾ ಕೇಂದ್ರ ಹಾಗೂ ಪ್ರಣಮ್ಯ ಸಮೂಹಸಂಸ್ಥೆಗಳು ಹಾಗು ಪ್ರಣಾಮ್ ನ್ಯೂಸ್ ಶಾಖೆ ಮುಳ್ಳೇರಿಯಾದಲ್ಲಿ ಉದ್ಘಾಟನೆಗೊಂಡಿತು. ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಕಚೇರಿ ಉದ್ಘಾಟಿಸಿದರು. ಧಾರ್ಮಿಕ ಮುಖಂಡ ಮತ್ತು ಅಸ್ತಿತ್ವಂ ಪ್ರತಿಷ್ಠಾನದ ಮಾರ್ಗದರ್ಶಕ ಕುಂಟಾರು ರವೀಶ ತಂತ್ರಿ ದೀಪಬೆಳಗಿ ಪ್ರಾರ್ಥಿಸಿದರು.
ಕೇಂದ್ರ ಸರ್ಕಾರದಿಂದ ಹಿಡಿದು ಗ್ರಾಮಪಂಚಾಯತಿವರೆಗಿನ ಎಲ್ಲ ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತಾದ ಸಂಪೂರ್ಣ ಮಾಹಿತಿಗಳನ್ನು ಅಗತ್ಯವಿರುವವರಿಗೆ ತಲುಪಿಸುವ ಉದ್ದೇಶದಿಂದ ಆರಂಭಗೊಂಡಿರುವುದು ಈ ಜನಸೇವಾ ಕೇಂದ್ರ. ಅದು ಕೂಡಾ ಉಚಿತವಾಗಿ ಈ ಮಾಹಿತಿಗಳನ್ನು ನೀಡುವ ಉದ್ದೇಶವನ್ನು ಹಮ್ಮಿಕೊಳ್ಳಲಾಗಿದೆ. ಜನಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಅಸ್ತಿತ್ವಂ ಪ್ರತಿಷ್ಠಾನ ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹವಾದುದು. ಇದರಿಂದಾಗಿ ಜನರಿಗೆ ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಅರಿವು ಸಿಗುವಂತಾಗಲಿ. ಹಣ ಮಾಡುವ ಉದ್ದೇಶವಿಲ್ಲದೆ ಜನರಿಗೆ ಮುಕ್ತ ಮನಸ್ಸಿನಿಂದ ಮಾಹಿತಿಗಳನ್ನು ನೀಡುವ ಕೇಂದ್ರವಾಗಿ ರೂಪುಗೊಳ್ಳಲಿರುವ ಜನಸೇವಾ ಕೇಂದ್ರವು ಕೇರಳದಲ್ಲಿ ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ ಮತ್ತು ಅಸ್ತಿತ್ವಂ ಪ್ರತಿಷ್ಠಾನದ ಮಾರ್ಗದರ್ಶಕ ಕುಂಟಾರು ರವೀಶ ತಂತ್ರಿ ಮಾತನಾಡಿ ಸಾರ್ವಜನಿಕರಿಗೆ ನೆರವು ನೀಡುವ ಗುಣ ಭಾರತೀಯರ ರಕ್ತದಲ್ಲೇ ಬಂದಿದೆ. ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದು ಎಂಬ ಧ್ಯೇಯದೊಂದಿಗೆ ಜಾತಿ, ಮತ, ಧರ್ಮಗಳ ಚೌಕಟ್ಟನ್ನು ಬಿಟ್ಟು ಎಲ್ಲ ಸಾರ್ವಜನಿಕರಿಗೂ ಜನಸೇವಾ ಕೇಂದ್ರದ ಸಹಾಯ ಸಿಗುವಂತಾಗಲಿ ಎಂದು ಹರಸಿದರು.ಕಾರ್ಯಕ್ರಮದಲ್ಲಿ ಕಾರಡ್ಕ ಗ್ರಾಮಪಂಚಾಯತ್ ಉಪಾಧ್ಯಕ್ಷ ಗೋಪಾಲಕೃಷ್ಣ,ಕಾಸರಗೋಡು ಬಿಜೆಪಿ ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಶುಭ ಹಾರೈಸಿದರು.
ಭಾರತೀಯ ತತ್ವ ಮತ್ತು ಆದರ್ಶಗಳನ್ನು ಸಾರ್ವಜನಿಕರಲ್ಲಿ ಬಿತ್ತುವ ಮುಖ್ಯ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿರುವ ಅಸ್ತಿತ್ವಂ ಪ್ರತಿಷ್ಠಾನ ಈ ಜನಸೇವಾ ಕೇಂದ್ರದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಸುದರ್ಶನ್ಸ್ ಜಾಬ್ ಇನ್ಫೋ ಸೆಂಟರ್ ಮತ್ತು ಪಬ್ಲಿಷಿಂಗ್ ಹೌಸ್ ನ ಮಾಲೀಕ ಶ್ಯಾಮಸುದರ್ಶನ್ ಭಟ್ ಹೊಸಮೂಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅಸ್ತಿತ್ವಂ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಮಂಜುನಾಥ ಉಡುಪ ಪ್ರಸ್ತಾವನೆಗೈದರು. ಪ್ರಣಮ್ಯ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಕಾಶ್ ವಸಿಷ್ಠ ವಂದಿಸಿದರು.