ಭಟ್ಕಳ : ಜಿಲ್ಲಾ ಕಸಾಪದ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಪರಿಕಲ್ಪನೆಯ ಹಿನ್ನಲೆಯಲ್ಲಿ ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಇಲ್ಲಿನ ಕುಂಟವಾಣಿಯ ಸರ್ಕಾರಿ ಪ್ರೌಢಶಾಲೆಯ ಕುವೆಂಪು ಕನ್ನಡ ಸಂಘದ ಸಹಯೋಗದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನದ ಅಂಗವಾಗಿ ವಿಧ್ಯಾರ್ಥಿಗಳಿಗಾಗಿ ಸುಂದರ ಕೈ ಬರೆಹ ಮತ್ತು ದಾಸರ ಪದಗಳ ಗಾಯನ ಸ್ಪರ್ಧೆ ಜರುಗಿತು. ಇದೇ ಸಂದರ್ಭದಲ್ಲಿ ಕುವೆಂಪು ಕನ್ನಡ ಸಂಘದ ವತಿಯಿಂದ ಖ್ಯಾತ ಕವಿಗಳ ಕನ್ನಡ ಘೋಷಣೆಗಳ ಫಲಕಗಳನ್ನು ಹಾಗೂ ಸಂವಿಧಾನದ ಪೂರ್ವಪೀಠಿಕೆಯ ಕನ್ನಡ ಅವತರಣಿಕೆಯ ಫಲಕವನ್ನು ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಅನಾವರಣಗೊಳಿಸಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ನಮ್ಮ ಭಾಷೆ, ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವ ಸದುದ್ದೇಶದಿಂದ ಇಂಥಹ ಸ್ಪರ್ಧೆಯನ್ನು ಪರಿಷತ್ತು ಆಯೋಜಿಸಿದೆ.
ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಳ್ಳುವ ಜೊತೆಗೆ ನಾಡು ನುಡಿಯ ಅಭಿಮಾನವನ್ನು ಬೆಳೆಸಿಕೊಳ್ಳಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕಿ ವೀಣಾ ಸಭಾಹಿತ ಮಾತನಾಡಿ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಅವರಲ್ಲಿ ಕನ್ನಡ ಪ್ರೇಮವನ್ನು ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರಲ್ಲದೇ ವಿದ್ಯಾರ್ಥಿಗಳಿಗಾಗಿ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ತಮ್ಮೆಲ್ಲ ಸಹಕಾರವನ್ನು ಸದಾ ನೀಡುವುದಾಗಿ ನುಡಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮೂಹ ಸಂಪನ್ಮೂಲ ವ್ಯಕ್ತಿ, ಕಸಾಪ ಆಜೀವ ಸದಸ್ಯ ಸುರೇಶ ಮುರ್ಡೇಶ್ವರ ಸಾಹಿತಿ ಆರ್.ವಿ.ಸರಾಫ್ ಅವರ ಕೃತಿಗಳನ್ನು ಹಾಗೂ ಪ್ರಶಂಸನಾ ಪತ್ರವನ್ನು ಬಹುಮಾನವಾಗಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಬಂಢಾರಿ, ಶಿಕ್ಷಕರಾದ ಮಾರುತಿ ನಾಯ್ಕ, ಶಶಿಕಲಾ ನಾಯ್ಕ, ಸವಿತಾ ನಾಯ್ಕ ಉಪಸ್ಥಿತರಿದ್ದರು. ಶಿಕ್ಷಕ ಕುಮಾರ ನಾಯ್ಕ ಬಹುಮಾನ ವಿತರಣೆಯನ್ನು ನಿರ್ವಹಿಸಿದರೆ ಶಿಕ್ಷಕ ಡಾ.ಸುರೇಶ ತಾಂಡೇಲ ಎಲ್ಲರನ್ನು ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ಅನು ಸಂಗಡಿಗರು ಸ್ವಾಗತ ಗೀತೆ ಹಾಡಿದರೆ,ಉಮಾ ಸಂಗಡಿಗರು ನಾಡಗೀತೆ ಹಾಡಿದರು. ವಿದ್ಯಾರ್ಥಿನಿ ಸಾನಿಕಾ ನಿರ್ವಹಿಸಿದರು. ಶಾಲಾ ಗ್ರಂಥಾಲಯಕ್ಕೆ ಸಾಹಿತಿ ಆರ.ವಿ.ಸರಾಫ್ ಅವರ ಅವರ ಕೃತಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಶಿಕ್ಷಕವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.