ಕುಮಟಾ: ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಲು ಕೌಶಲ್ಯ ಶಿಕ್ಷಣ ನೀಡಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ ಕೌಶಲ್ಯ ಶಿಕ್ಷಣ ಸೇರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸ್ವಯಂ ಶಿಸ್ತಿನ ಜತೆಗೆ ದೇಶ ಮೊದಲು ಎಂಬ ಭಾವ ಮೂಡಿಸಲಿದ್ದೇವೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸೆಲ್ಕೋ ಫೌಂಡೇಶನ್ ಬೆಂಗಳೂರಿನ ಸಹಕಾರದಲ್ಲಿ ತಾಲೂಕಿನ ಗೋರೆಯ ಸುಂದರ ಪರಿಸರದಲ್ಲಿರುವ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜ್‌ನಲ್ಲಿ ಹಮ್ಮಿಕೊಂಡ ಜಿಲ್ಲಾ ವಿಜ್ಞಾನ ಮೇಳ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಮಾಹಿತಿ ಕಾರ್ಯಗಾರವನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉದ್ಘಾಟಿಸಿ, ಮಾತನಾಡಿದರು.
ಡಿಗ್ರಿ ಪಡೆದ ಅದೆಷ್ಟೊ ಯುವಕರಿಗೆ ಉದ್ಯೋಗಕ್ಕಾಗಿ ನಡೆಯುವ ಸಂದರ್ಶನ ಎದುರಿಸುವುದು ಕಷ್ಟವಾಗುತ್ತಿದೆ. ಯಾಕೆಂದರೆ ನಮ್ಮ ಯುವಕರಲ್ಲಿ ಕೌಶಲ್ಯದ ಕೊರತೆ ಇದೆ. ಅದನ್ನು ಕಾಲೇಜ್ ಶಿಕ್ಷಣದಲ್ಲಿ ಜಾಗೃತಗೊಳಿಸಲು ವಿಜ್ಞಾನ ಮೂಲ ಕಾರಣವಾಗುತ್ತದೆ. ಸಂಶೋಧನಾ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆದಷ್ಟು ಪ್ರಶ್ನೆ ಮಾಡುವ ಸಾಮರ್ಥ್ಯ ವೃದ್ಧಿಯಾಗುತ್ತದೆ. ಹೊಸ ಕಲಿಕೆಗೂ ಪೂರಕವಾಗುತ್ತದೆ ಎಂದ ಅವರು, ಈ ಶಿಕ್ಷಣ ಸಂಸ್ಥೆ ನಮ್ಮ ಶಿರಸಿಯ ಮಾರಿಕಾಂಬಾ ಕಾಲೇಜ್‌ಗೆ ಸ್ಪರ್ಧೆ ನೀಡುವ ಮಟ್ಟಿಗೆ ಬೆಳೆಯಲು ಪ್ರಯತ್ನಿಸಿ ಎನ್ನುವ ಮೂಲಕ ಸೌಹಾರ್ದಯುತ ಸವಾಲೆಸೆದರು.
ದಿಕ್ಸೂಚಿ ಭಾಷಣ ಮಾಡಿದ ಸೆಲ್ಕೋ ಕಂಪನಿಯ ಸಂಸ್ಥಾಪಕ ಡಾ.ಎಚ್.ಹರೀಶ ಹಂದೆ, ಸೋಲೇ ಗೆಲುವಿನ ಮೆಟ್ಟಿಲು. ಸೋತವನಿಗೆ ಮಾತ್ರ ಗೆಲ್ಲುವ ಛಲ ಹುಟ್ಟಲು ಸಾಧ್ಯ. ಇವತ್ತು ಜಗತ್ತಿನಲ್ಲಿರುವ ಬಹುತೇಕ ಸಾಧಕರು ವಿದ್ಯಾರ್ಥಿ ಜೀವನದಲ್ಲಿ ಫೇಲ್ ಆದವರು. ಅವರ‍್ಯಾರು ಧೃತಿಗೆಡಲಿಲ್ಲ. ತನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು ಆ ಕ್ಷೇತ್ರದಲ್ಲಿ ಪರಿಶ್ರಮ ಪಟ್ಟ ಫಲವಾಗಿ ಸಾಧಕರಾದರು. ಹಾಗಾಗಿ ಶಿಕ್ಷಕರು ಪ್ರತಿಭಾವಂತರಿಗಿ0ತ ಕಲಿಕೆಯಲ್ಲಿ ಹಿಂದಿದ್ದವರಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯಾಗಿಸಬೇಕು. ವಿಧಾನಸಭಾಧ್ಯಕ್ಷರು ಕೆನರಾ ಎಕ್ಸಲೆನ್ಸ್ ಕಾಲೇಜಿಗೆ ನೀಡಿದ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಇನ್ನೊಂದು ವರ್ಷದಲ್ಲಿ ವಿದ್ಯಾರ್ಥಿಗಳ ಸಂಶೋಧನೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ರಾಜ್ಯದಲ್ಲೆ ದಿ ಬೆಸ್ಟ್ ಕಾಲೇಜ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವಂತೆ ಮಾಡಲು ನಾನು ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಇದನ್ನೂ ಓದಿ.
ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜ್ ಸಂಸ್ಥಾಪಕ ಡಾ.ಜಿ.ಜಿ.ಹೆಗಡೆ, ಶಾಸಕ ದಿನಕರ ಶೆಟ್ಟಿ ಮಾತನಾಡಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರೊಬೆಷನರಿ ಐಎಎಸ್ ಜುಬಿನ್ ಮಹಪಾತ್ರ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಗೊಂದಲ ಮಾಡಿಕೊಳ್ಳಬೇಡಿ. ನಿಮಗೆ ಅಭಿರುಚಿಯಿರುವ ಕ್ಷೇತ್ರವನ್ನೆ ಆಯ್ಕೆ ಮಾಡಿಕೊಂಡು ಸಾಧನೆ ಪಥದಲ್ಲಿ ಸಾಗಿ. ಸಂಶೋಧನಾತ್ಮಕ ಭಾರತ ಎಂಬ ಪರಿಕಲ್ಪನೆಯನ್ನೆ ಹೊಸ ಶಿಕ್ಷಣ ನೀತಿ ಹೊಂದಿದೆ. ಕಲಿಕೆ ಎನ್ನುವುದು ನಿರಂತರ. ಒಳ್ಳೆಯ ಕೆಲಸ ಮಾಡುವ ಜೊತೆಗೆ ಸಮಾಜಕ್ಕೆ ಸಹಕಾರ ಮಾಡುವ ಮನೋಭಾವ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದೇವಗಿರಿ ಗ್ರಾಪಂ ಅಧ್ಯಕ್ಷೆ ರತ್ನ ಹರಿಕಂತ್ರ, ಕಾಲೇಜ್ ಪ್ರಾಂಶುಪಾಲ ಡಿ ಎನ್ ಭಟ್ ಇತರರು ಇದ್ದರು.