ಗೋಕರ್ಣ: ರಾಮ ರಾಮಚಂದ್ರಾಪುರ ಮಠದ ಆತ್ಮವಾದರೆ ಶ್ರೀಮಠದ ಪ್ರಾಣ ಕಾರ್ಯಕರ್ತರು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ. ಭಾರತೀ ಮಹಾಸ್ವಾಮೀಜಿ ಬಣ್ಣಿಸಿದರು. ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಮಾವೇಶದ ಸಾನ್ನಿಧ್ಯ ವಹಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ಶ್ರೀರಾಮಚಂದ್ರಾಪುರ ಮಠದ ಗುರುಶಿಷ್ಯ ಬಾಂಧವ್ಯ ಇಷ್ಟು ವಿಶಿಷ್ಟವಾಗಿದೆ ಎನ್ನುವುದೇ ಸಮಾಜಕ್ಕೆ ಸೋಜಿಗ.
ಶ್ರೀಮಠದ ಪ್ರಾಣ ಕಾರ್ಯಕರ್ತರಲ್ಲಿದೆ. ಎಷ್ಟೋ ಮಠಗಳಿಗೆ ಚಿನ್ನ, ಸಂಪತ್ತು, ಹಣ ಮತ್ತಿತರ ಅಂಶಗಳು ಶಕ್ತಿಯಾದರೆ ರಾಮಚಂದ್ರಾಪುರ ಮಠಕ್ಕೆ ಕಾರ್ಯಕರ್ತರೇ ಬಲ. ಇಂಥ ಸಮಾವೇಶದಿಂದ ಮಠದ ಶಕ್ತಿ ವೃದ್ಧಿಯಾಗುತ್ತದೆ. ಆತ್ಮ ರಾಮನಲ್ಲಿದೆ. ನಮ್ಮ ಬಲ ನೀವು ಎಂದು ಬಣ್ಣಿಸಿದರು.
ಕಾರ್ಯಕರ್ತರ ಸಮಾವೇಶ ರಾಮಪೂಜೆಗೆ ಸಮ. ಚಾತುರ್ಮಾಸ್ಯ ನಡೆಸಿದವನು ರಾಮ. ನಮ್ಮೆಲ್ಲರಿಂದ ಸೇವೆ ಪಡೆದು ಇದನ್ನು ನಡೆಸಿದ್ದು ರಾಮ; ನಮ್ಮೆಲ್ಲರ ಜೀವನವನ್ನು ನಡೆಸುವುದೇ ರಾಮ. ಆದ್ದರಿಂದ ಕಾರ್ಯಕರ್ತರನ್ನು ಗೌರವಿಸುವುದು ರಾಮನಿಗೆ ಸಲ್ಲುವ ಪೂಜೆ ಎಂದು ಹೇಳಿದರು.
ಎಲ್ಲ ಕಾರ್ಯಕರ್ತರಿಗೆ ಶ್ರೀಪೀಠದ ಅನುಗ್ರಹ ಇರುವುದರಿಂದ ಯಾವ ಗ್ರಹಚಾರಗಳೂ ಕಾಡಲಾರವು ಎಂದು ಅಭಯ ನೀಡಿದರು. ತಾಯಿ ಜನ್ಮಕೊಟ್ಟದ್ದು ಸತ್ಯವಾದರೆ, ತಾಯಿಯ ರೂಪದಲ್ಲಿ ರಾಮನೇ ಈ ಜನ್ಮ ಕೊಟ್ಟಿದ್ದಾನೆ. ವಿದ್ಯೆ, ಸಂಸ್ಕಾರವನ್ನು ತಂದೆ ನೀಡಿದ್ದು ಸತ್ಯವಾದರೆ ರಾಮನೇ ಅವನಲ್ಲಿದ್ದು ಈ ಕಾರ್ಯ ಮಾಡಿಸಿದ್ದು ರಾಮ ಎನ್ನುವುದು ಪರಮ ಸತ್ಯ. ಆದ್ದರಿಂದ ಎಲ್ಲ ಕೃತಜ್ಞತೆಗಳನ್ನು ಸಲ್ಲಿಸಬೇಕಾದ್ದು ರಾಮನಿಗೆ ಎಂದು ವಿಶ್ಲೇಷಿಸಿದರು.
ಶಿಷ್ಯಭಕ್ತರಲ್ಲಿ ಸದ್ಭುದ್ಧಿಯನ್ನು ಕರುಣಿಸಿ, ಸೇವಾಕೈಂಕರ್ಯದ ಮೂಲಕ ಕಾರಣಕರ್ತರನ್ನಾಗಿ ಮಾಡಿದ್ದು ರಾಮ ಎಂಬ ಕಾರಣಕ್ಕೆ ಈ ರಾಮಪೂಜೆ ಸಂದಿದೆ ಎಂದರು. ಸೇವಾ ಅವಕಾಶಗಳು ಬಂದಾಗ ತಪ್ಪಿಸಿಕೊಳ್ಳದೇ ಪ್ರಾಮಾಣಿಕವಾಗಿ ಬಳಸಿಕೊಳ್ಳಬೇಕು ಎಂದರು. ಶ್ರೀಮಠದ ಕಾರ್ಯ, ಕಾರ್ಯಕ್ರಮಗಳಿಗೆ ನಿರಂತರ ಕಾರ್ಯಕರ್ತರಾಗಬೇಕು ಎಂದು ಅಪೇಕ್ಷಿಸಿದರು. ನಮ್ಮ ಸೇವೆ ಶೂನ್ಯ ಎಂಬ ಭಾವನೆ ಯಾವ ಕಾರ್ಯಕರ್ತರಲ್ಲೂ ಮೂಡಬಾರದು ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕರ್ತರು ಪದೇ ಪದೇ ಮಠಕ್ಕೆ ಬರುವುದು ಶ್ರೀಮಠದ ಚೈತನ್ಯ ವರ್ಧನೆಗೆ ಸಹಕಾರಿ. ಮಠದ ಸಕಲ ಕಾರ್ಯಗಳ ಕಾರ್ಯಕರ್ತರು. ಕಾರ್ಯಕರ್ತರನ್ನು ಸಂಘಟಿಸಿ ಅವರ ಶಕ್ತಿಯನ್ನು ತೋರಿಸಿಕೊಡುವುದು ಇದರ ಉದ್ದೇಶ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮ ಮಳೆಯಾದರೆ, ಶಾಶ್ವತ ಕಾರ್ಯಗಳು ಹೊಳೆ ಇದ್ದಂತೆ. ಶಾಶ್ವತ ಕಾರ್ಯಗಳಿಗೆ ನೀವು ನೀರಾಗಿ ಹರಿಯಬೇಕು ಎಂದು ಆಶಿಸಿದರು. ನದಿ ತುಂಬಬೇಕಾದರೆ ಮಳೆ ಬರಬೇಕು; ಅಂತೆಯೇ ಕಾರ್ಯಗಳಿಗೆ ಸ್ಫೂರ್ತಿಯಾಗಿ ನಿರಂತರ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಸಲಹೆ ಮಾಡಿದರು. ಶ್ರೀಮಠದ ಮಹತ್ವದ ಯೋಜನೆಯಾದ ವಿಶ್ವವಿದ್ಯಾಪೀಠಕ್ಕೆ ಪ್ರತಿಯೊಬ್ಬರ ಸೇವೆ ಸಲ್ಲಬೇಕು. ಇದು ವಿಶ್ವಕ್ಕೇ ಒಳಿತು ಮಾಡುವ ಕಾರ್ಯ ಎಂದು ಬಣ್ಣಿಸಿದರು.
ಸ್ವಾಗತ ಸಮಿತಿ ಗೌರವಾಧ್ಯಕ್ಷ ಹಾಗೂ ಕುಮಟಾ- ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿದರು. ಶ್ರೀಮಠದ ಲೋಕ ಸಂಪರ್ಕಾಧಿಕಾರಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವ್ಯವಸ್ಥಾ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ.ಆರ್.ಎಸ್.ಹೆಗಡೆ ಹರಗಿ ಮತ್ತಿರರರು ಉಪಸ್ಥಿತರಿದ್ದರು. ಹವ್ಯಕ ಸೇವಾ ಪ್ರತಿಷ್ಠಾನದ ಲಾಂಛನವನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಗಣೇಶ ಜೋಶಿ ಮತ್ತು ರಾಘವೇಂದ್ರ ಮಧ್ಯಸ್ಥ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.