ಕುಮಟಾ: ಪರೇಶ ಮೇಸ್ತ ಪ್ರಕರಣದಲ್ಲಿ ಸಿಬಿಐ ನೀಡಿರುವ ವರದಿಯ ಮೇಲೆ ವಿಶ್ವಾಸವಿಲ್ಲದ ಬಿಜೆಪಿಗರು ಪುನರ್ ತನಿಖೆಗೆ ಒತ್ತಾಯಿಸುವ ಮೂಲಕ ಈ ಪ್ರಕರಣವನ್ನು ಇನ್ನಷ್ಟು ವರ್ಷಗಳು ಮಂದೂಡುವ ಷಡ್ಯಂತ್ರ ರೂಪಿಸಿದ್ದು, ಈ ಷಡ್ಯಂತ್ರ ಬಯಲು ಮಾಡಲು ಜನ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶಕ್ಕೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ , ರಾಜ್ಯ ಉಸ್ತುವಾರಿ ಸುರ್ಜೇವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಮಾಜಿ ಸಚಿವ ಹಾಗೂ ಹಿರಿಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಪರೇಶ ಮೇಸ್ತಾನ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಂಡ ಬಿಜೆಪಿಗರು ಜಿಲ್ಲೆಯಲ್ಲಿ ಕೋಮು ಗಲಬೆ ಸೃಷ್ಟಿಸಿ, ಅಧಿಕಾರ ಹಿಡಿದರು. ಬಿಜೆಪಿಗರ ಆಗ್ರಹದಂತೆ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದ್ದೆವು. ಇವರದ್ದೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ವರದಿ ನೀಡುವ ಮೂಲಕ ಇದೊಂದು ಆಕಸ್ಮಿಕ ಮತ್ತು ಸಹಜ ಸಾವೆಂದು ಸ್ಪಷ್ಟಪಡಿಸಿದೆ. ಬಿಜೆಪಿಗರ ಸುಳ್ಳಿನ ಮುಖವಾಡ ಕಳಚಿ ಬಿದ್ದಿದೆ. ಆದರೂ ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲದ ಬಿಜೆಪಿಗರು ಮತ್ತೆ ಪುನರ್ ತನಿಖೆಯ ಹೊಸ ನಾಟಕ ಶುರು ಮಾಡಿದ್ದಾರೆ.
ಈ ನಾಟಕಕ್ಕೆ ತೆರೆ ಎಳೆಯುವ ಉದ್ದೇಶದಿಂದ ಮತ್ತು ಈ ಪ್ರಕರಣದ ಸತ್ಯಾಸತ್ಯತೆ ಜನರ ಮುಂದೆ ತೆರೆದಿಡಲು ಜನ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಮಂಕಾಳು ವೈದ್ಯ, ಸತೀಶ ಸೈಲ್, ಪ್ರಮುಖರಾದ ರಮಾನಂದ ನಾಯಕ, ಎಸ್.ಕೆ.ಭಾಗ್ವತ, ಸಾಯಿ ಗಾಂವಕರ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ಯುವ ಮುಖಂಡ ರವಿಕುಮಾರ ಶೆಟ್ಟಿ, ರತ್ನಾಕರ ನಾಯ್ಕ, ಮಂಜುನಾಥ ಎಲ್ ನಾಯ್ಕ, ಆರ್ ಎಚ್ ನಾಯ್ಕ, ಶಿವಾನಂದ ಹೆಗಡೆ ಕಡತೋಕಾ, ಯಶೋಧರಾ ನಾಯ್ಕ, ಗಾಯತ್ರಿ ಗೌಡ, ಭಾಸ್ಕರ ಪಟಗಾರ, ಚಿತ್ರಾ ಕೋಟರ‍್ಕರ್ ಕಾರವಾರ, ಸೇರಿದಂತೆ ಮತ್ತಿತರರು ಇದ್ದರು.