ಕುಮಟಾ: ಯಕ್ಷಗಾನ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಗೂ ಅಧಿಕ ಕಾಲದಿಂದ ಅನವರತವಾಗಿ ಕಾರ್ಯ ಸಲ್ಲಿಸುತ್ತಿರುವ ಮುಮ್ಮೇಳದ ಮೂವರು ಹಿರಿಯ ಕಲಾವಿದರಿಗೆ ಹಾಗೂ ಹಿಮ್ಮೇಳದ ಈರ್ವರು ಹಿರಿಯ ಕಲಾವಿದರಿಗೆ ಬೆಂಗಳೂರು ಹಾಗೂ ಕುಮಟಾದ ಶ್ರೀ ಮಹಾಬಲ ಶೋಧ ಸಂಸ್ಥಾನಮ್ ಯಕ್ಷಗಾನದ ಮೇರು ಕಲಾವಿದರಾಗಿದ್ದ ಡಾ. ಮಹಾಬಲ ಹೆಗಡೆ ಕೆರೆಮನೆ ಹೆಸರಿನ ಪ್ರಶಸ್ತಿ ಪ್ರಕಟಿಸಿದೆ.
ಈ ವಿಷಯ ತಿಳಿಸಿದ ಸೆಲ್ಕೋದ ಸಿಇಓ ಹಾಗೂ ಶ್ರೀ ಮಹಾಬಲ ಶೋಧ ಸಂಸ್ಥಾನಮ್ ಮುಖ್ಯಸ್ಥ ಮೋಹನ ಭಾಸ್ಕರ ಹೆಗಡೆ ಅವರು, ಡಿಸೆಂಬರ್ ಮೊದಲ ವಾರ ಕುಮಟಾದ ಹೊಸಹೆರವಟ್ಟಾದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಂಗಸ್ಥಳದ ರಾಜ ಎಂದೇ ಹೆಸರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣ ಯಾಜಿ ಬಳ್ಕೂರು, ತಮ್ಮ ಪಾತ್ರ ವಿಸ್ತಾರ, ರಂಗ ನಡೆಯ ಮೂಲಕ ಹೆಸರಾದ ಕೊಂಡದಕುಳಿ ರಾಮಚಂದ್ರ ಹೆಗಡೆ, ಯಕ್ಷಗಾನ ನರ್ತನಗಾರಿಕೆ ಹಾಗೂ ಇದೇ ಮೊದಲ ಬಾರಿಗೆ ಯಕ್ಷ ಮಹಾ ಗಣಪತಿ ಪ್ರತಿಷ್ಠಾಪಿಸಿ ಪೂಜಿಸುತ್ತಿರುವ ಸಿದ್ದಾಪುರದ ವಿನಾಯಕ ಹೆಗಡೆ ಕಲಗದ್ದೆ ಅವರಿಗೆ ರಂಗ ಮಹಾಬಲ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ನಾಲ್ಕು ದಶಕಗಳಿಂದ ಅನೇಕ ಹಿರಿಯ, ಕಿರಿಯನ್ನು ರಂಗಸ್ಥಳದಲ್ಲಿ ಕುಣಿಸುತ್ತಿರುವ ಭಾಗವತ ಕೊಳಗಿ ಕೇಶವ ಹೆಗಡೆ, ಹಾಗೂ ಕಡತೋಕಾ ಜೋಗಿಮನೆ ಗೋಪಾಲಕೃಷ್ಣ ಭಟ್ಟ ಅವರಿಗೆ ಗಾನ ಮಹಾಬಲ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಟಿಸಿದ್ದಾರೆ.
ಸಾವಿರಾರು ಮಕ್ಕಳಿಗೆ ನಿಸ್ಪ್ರಹವಾಗಿ ವಿದ್ಯಾದಾನ ಮಾಡಿದ್ದ ಶಿಕ್ಷಕ ಭಾಸ್ಕರ ಎಲ್.ಹೆಗಡೆ ಸಂಸ್ಮರಣೆ ಸಮಾರಂಭದಲ್ಲಿ ರಾಮಚಂದ್ರಾಪುರ ಮಠದ ಮಠಾಧೀಶರಾದ
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲು ಯೋಜಿಸಲಾಗಿದೆ.
ಯಕ್ಷಗಾನದ ಅಗ್ರಮಾನ್ಯ ಕಲಾವಿದರಾದ ಈ ಐವರನ್ನು ಪುರಸ್ಕರಿಸುತ್ತಿರುವದು ಯಕ್ಷಗಾನದ ಯುಗಪ್ರವರ್ತಕ ಕಲಾವಿದ ಡಾ. ಮಹಾಬಲ ಹೆಗಡೆ ಅವರ ಸಂಸ್ಮರಣೆಯ ಭಾಗ ಹಾಗೂ ಆತ್ಮ ಸಂತೋಷದ ಕರ್ತವ್ಯ ಎಂದೇ ಭಾವಿಸಿದ್ದೇವೆ ಎಂದು ಮೋಹನ ಭಾಸ್ಕರ ಹೆಗಡೆ ಹರ್ಷವ್ಯಕ್ತಪಡಿಸಿ ಪ್ರಕಟನೆಯಲ್ಲಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದ್ದಾರೆ.