ಕುಮಟಾ: ಹದಿಹರೆಯದ ದಾರಿತಪ್ಪುವ ವಯಸ್ಸನ್ನು ಅಧ್ಯಯನಕ್ಕಾಗಿ ಸದುಪಯೋಗಪಡಿಸಿಕೊಂಡವರಿಗೆ ಭವಿಷ್ಯವಿದೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಜನಪ್ರಿಯ ಇಂಗ್ಲೀ಼ಷ್ ಬೋಧಕರಾದ ತಾಲ್ಲೂಕಿನ ಮಿರ್ಜಾನಿನ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಾಧ್ಯಾಪಕರಾದ ಡಿ.ಜಿ.ಪಂಡಿತ್‌ರವರು ನುಡಿದರು.
ಅವರು ಬರ್ಗಿಯ ಗ್ರಾಮ ಪಂಚಾಯತದ ಸಭಾಭವನದಲ್ಲಿ ಸ್ಥಳೀಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠ, ಸದ್ಗುರು ಶ್ರೀ. ರಾಘವೇಂದ್ರ ಸಾರ್ವಭೌಮ ಸಂಸ್ಕೃತ ಸಂಘ, ಕುಮಟಾದ ಕರ್ನಾಟಕ ಸಂಸ್ಕೃತ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಬೋಧಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ “ಶ್ರೀರಾಮ ರಸಾಯನ”- ರಾಮಾಯಣದ ಸಪ್ತ ಕಾಂಡಗಳ ಸರಣಿ ಉಪನ್ಯಾಸ ಮಾಲಿಕೆಯಲ್ಲಿ “ಬಾಲ ಕಾಂಡ”ದ ಕುರಿತು ಉಪನ್ಯಾಸವನ್ನು ನೀಡುತ್ತಾ ಮಾತನ್ನಾಡಿದರು.
ರಾಮಾಯಣವು ಶತ-ಸಹಸ್ರಮಾನಗಳು ಕಳೆದರೂ ಅಳಿಯದೇ ಉಳಿದಿರುವ ಮಹತ್‌ಕೃತಿಯಾಗಿದ್ದು, ಪ್ರಕೃತಿಯೊಂದಿಗಿದ್ದ ವಾಲ್ಮೀಕಿ ಮಹರ್ಷಿಯು ಸೃಜಿಸಿದ ಈ ಮಹಾಕಾವ್ಯವು ಮನುಷ್ಯನ ಬದುಕಿಗೆ ಅತ್ಯಂತ ಆಪ್ತವಾಗಿರುವುದರಿಂದ ಅಧ್ಯಯನಕ್ಕೆ ಯೋಗ್ಯವಾಗಿದೆ ಎಂದ ಅವರು, ನಿತ್ಯ-ನಿರಂತರವಾಗಿ ರಾಮಾಯಣವನ್ನು ಪಠಿಸಲು ಕರೆ ನೀಡಿದರು.
ಕಾರ್ಯಕ್ರಮವನ್ನು ಸ್ಥಳೀಯ ಧುರೀಣರಾದ ನಾರಾಯಣ ನಾಗು ನಾಯಕರವರು ಉದ್ಘಾಟಿಸಿದರು. ವಿದ್ಯಾರ್ಥಿನಿ ಎನ್.ನಾಗಲಕ್ಷ್ಮೀ ಸ್ವಾಗತಿಸಿದರು. ನಾಗಶ್ರೀ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಸಂಘಟಕರಾದ ಕರ್ನಾಟಕ ಸಂಸ್ಕೃತ ಪರಿಷತ್ ಮತ್ತು ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಮಂಜುನಾಥ ಗಾಂವಕರ ಬರ್ಗಿ ಹಾಗೂ ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.