ಭಟ್ಕಳ : ಖಾಸಗಿ ಹೂಡಿಕೆಗಳಿಗೆ ಅವಕಾಶ ನೀಡುವ ಭರಾಟೆಯಲ್ಲಿ, ಕಡಲ ತೀರಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳ ನಿರ್ಮಾಣ ಮಾಡುವುದು ಜಿಲ್ಲೆಯ ಮೀನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಜಿಲ್ಲೆಯ ಸುಂದರ ಕಡಲ ತೀರಗಳು ಧೂಳುಮಯಗೊಂಡು ಪರಿಸರ ಮತ್ತು ಜೀವ ವೈವಿಧ್ಯತೆಗಳ ವಿನಾಶಕ್ಕೆ ಕಾರಣವಾಗಿ ಮುಂದೆ ಮೀನುಗಾರಿಕೆ ಉದ್ಯಮ ಕುಸಿಯುವ ಭೀತಿ ಇದೆ ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯಕಾಯದರ್ಶಿ ಚಂದ್ರಕಾಂತ ಕೊಚರೇಕರ ಇಂದು ಇಲ್ಲಿ ತೀವೃ ಕಳವಳ ವ್ಯಕ್ತಪಡಿಸಿದರು.
ನವೆಂಬರ್ 21 ವಿಶ್ವ ಮೀನುಗಾರಿಕೆ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮೀನುಗಾರರು ಮತ್ತು ಮೀನುಗಾರರ ಸಂಘಟನೆಗಳು ಮೆರವಣಿಗೆ ಹಮ್ಮಿಕೊಂಡಿರುವುದನ್ನು ಸ್ವಾಗತಿಸುವದಾಗಿ ತಿಳಿಸಿದ ಅವರು ಮೆರವಣಿಗೆಯಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಮೀನುಗಾರರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡು ಮೀನುಗಾರಿಕೆಗೆ ಮಾರಕವಾಗುವ ಬ್ರಹತ್ ಯೋಜನೆಗಳ ವಿರುದ್ಧ ಧ್ವನಿ ಎತ್ತುವ ಕೆಲಸ ಆಗಬೇಕು ಎಂದು ಅವರು ಕರೆ ನೀಡಿದ್ದಾರೆ.
ಜಿಲ್ಲೆಯ ಕಾರವಾರದಿಂದ ಅಂಕೋಲಾ ವರೆಗಿನ ಹೆಚ್ಚಿನ ಕಡಲತೀರಗಳು ನೌಕಾನೆಲೆ ಮತ್ತು ಮೂರು ಬ್ರಹತ್ ವಾಣಿಜ್ಯ ಬಂದರುಗಳ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ. ಖಾಸಗಿ ಭಂಡವಾಳ ಆಕರ್ಷಿಸುವ ನೆಪದಲ್ಲಿ ಜಿಲ್ಲೆಯ ಇನ್ನುಳಿದ ಸುಂದರ ಕಡಲ ತೀರಗಳನ್ನು ಲೀಸ್ ಹೆಸರಿನಲ್ಲಿ ಖಾಸಗಿಯವರಿಗೆ ಮಾರಿ ಪರಿಸರ ಮತ್ತು ಜನರ ಆರೋಗ್ಯಕ್ಕೆ ಮಾರಕವಾಗಲಿರುವ ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಹುನ್ನಾರ ನಡೆದಿದೆ. ಇದಕ್ಕಾಗಿಮೀನುಗಾರರನ್ನು ಒಡೆದು ಅಳುವ ವ್ಯವಸ್ಥಿತ ಷಡ್ಯಂತ್ರಗಳು ಜಿಲ್ಲೆಯಲ್ಲಿ ನಡೆಯುತ್ತಿದೆ. ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸಿದ ಮೀನುಗಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ.
ಆದರೂ ಜಿಲ್ಲೆಯ ಇನ್ನುಳಿದ ಕಡಲತೀರಗಳನ್ನು ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಸೀಮಿತವಾಗಿ ಜನರ ಬಳಕೆಗೆ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ. ಪರಿಸರ ಕಾನೂನುಗಳನ್ನು ಉಲ್ಲಂಘಿಸಿ ಕಡಲತೀರಗಳಲ್ಲಿ ವಾಣಿಜ್ಯ ಬಂದರು ನಿರ್ಮಾಣವನ್ನು ವಿರೋಧಿಸುತ್ತಿರುವ ಮೀನುಗಾರರ ವಿರುದ್ಧ ಕಾಸರಕೋಡ ಮತ್ತು ಇತರೆಡೆಗಳಲ್ಲಿ ದಾಖಲಿಸಿರುವ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಮತ್ತು ಜಿಲ್ಲೆಯ ಎಲ್ಲಾ ಮೀನುಗಾರಿಕಾ ಬಂದರುಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಹಾಗೂ ಹೊಳೆತ್ತುವ ಕಾಮಗಾರಿಗಳನ್ನು ತ್ವರಿತವಾಗಿ ಹಾಗೂ ನಿರಂತರವಾಗಿ ನಡೆಸಿಕೊಂಡು ಬರಲು ಸರಕಾರಕ್ಕೆ ಹಕ್ಕೊತ್ತಾಯ ಮಾಡಲಾಗುವದು ಎಂದು ಕೊಚರೇಕರ ತಿಳಿಸಿದ್ದಾರೆ.