ಹೊನ್ನಾವರ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎನ್ನುವ ಶೀರ್ಷಿಕೆಯಡಿ ತಾಲೂಕಿನ ನವಿಲಗೋಣ ನಂ.1 ಶಾಲೆಯಲ್ಲಿ ತಹಶೀಲ್ದಾರ ನಾಗರಾಜ ನಾಯ್ಕಡ್ ಅಧ್ಯಕ್ಷತೆಯಲ್ಲಿ ಗ್ರಾಮವಾಸ್ತವ್ಯ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ನಾಗರಾಜ ನಾಯ್ಕಡ್ ಮಾತನಾಡಿ, ಇದು ಸರ್ಕಾರದ ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಪ್ರತಿ ತಿಂಗಳು ಮೂರನೇ ಶನಿವಾರ ತಾಲೂಕಿನ ಒಂದು ಗ್ರಾ.ಪಂ. ಕೇಂದ್ರ ಸ್ಥಾನದಲ್ಲಿ ಅಧಿಕಾರಿಗಳು ತೆರಳಿ ಸ್ಥಳೀಯ ಸಮಸ್ಯೆಗಳ ಅಹವಾಲು ಪಡೆದು ಸಮಸ್ಯೆ ಬಗೆಹರಿಸುವುದು ಮೂಲ ಉದ್ದೇಶವಾಗಿದೆ. ಇಲಾಖಾವಾರು ಸಂಬಂಧಿಸಿದ ಅಧಿಕಾರಿಗಳ ಮೂಲಕ ಸಮಸ್ಯೆಗಳನ್ನ ಬಗೆಹರಿಸಲಾಗುವುದು ಎಂದರು.
ಗ್ರಾ.ಪ0. ಅಧ್ಯಕ್ಷ ಸತೀಶ ಹೆಬ್ಬಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಸೌಲಭ್ಯ ಮನೆಬಾಗಿಲಿಗೆ ಬರುತ್ತಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದು ಸಾರ್ವಜನಿಕರು ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗ್ರಾಮದ ನಾಲ್ವರು ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಣ, ಆರೋಗ್ಯ, ಕಂದಾಯ, ಹೆಸ್ಕಾಂ, ಕೃಷಿ, ಕುಡಿಯುವ ನೀರು, ಸಮಾಜ ಕಲ್ಯಾಣ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಸಾರ್ವಜನಿಕರು ಇಲಾಖೆಯ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.
ಗ್ರಾಮದಲ್ಲಿ ವೈದ್ಯರ ಕೊರತೆಯ ಬಗ್ಗೆ ಚರ್ಚೆ ನಡೆದು, ವೈದ್ಯರುಗಳು ಗೈರು ಇರುವ ಬಗ್ಗೆ ಅಸಮಧಾನ ವ್ಯಕ್ತವಾಯಿತು. ಕಡತೋಕಾ ಪ್ರಾಥಮಿಕ ಕೇಂದ್ರ ವ್ಯಾಪ್ತಿಯ 5 ಉಪಕೇಂದ್ರದಲ್ಲಿ ವಾರದಲ್ಲಿ ಒಂದು ದಿನ ವೈದ್ಯರು, ಪ್ರತಿನಿತ್ಯ ಸಿಬ್ಬಂದಿ ಇರುವ ಬಗ್ಗೆ ಮಾಹಿತಿ ನೀಡಿದರು. ಕಳೆದ ತಿಂಗಳು ವೈದ್ಯರಿಗೆ ಧಾರವಾಡ ತರಬೇತಿ ಹಿನ್ನಲೆ ಸಮಸ್ಯೆ ಉಂಟಾಗಿತ್ತು ಎಂದರು. ಸಾರಿಗೆ ಇಲಾಖೆಯ ಅಧಿಕಾರಿಗಳು ಇಲಾಖೆಯ ಸಮಸ್ಯೆ ಬಗ್ಗೆ ಮಾತನಾಡಿ ಸಿಬ್ಬಂದಿ ಕೊರತೆ, ಬಸ್ ಕೊರತೆಯ ನಡುವೆ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು. ವಿವಿಧ ಸಮಸ್ಯೆ ಬಗ್ಗೆ 15ಕ್ಕಿಂತ ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿದ್ದು, ಹಲವು ವಿಷಯಗಳನ್ನು ಸ್ಥಳದಲ್ಲೆ ಪರಿಹರಿಸಲಾಯಿತು. ವಿವಿಧ ಸೌಲಭ್ಯದ ಫಲಾನಿಭವಿಗಳಿಗೆ ಆದೇಶ ಪ್ರತಿ ವಿತರಿಸಲಾಯಿತು. ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಸೌಲಭ್ಯದ ಬಗ್ಗೆ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಯಿತು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ನಾಯ್ಕ, ಸದಸ್ಯ ರವಿ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ ಭಟ್, ವಿವಿಧ ಇಲಾಖೆಯ ಅಧಿಕಾರಿಗಳಾದ ಡಾ.ಉಷಾ ಹಾಸ್ಯಗಾರ, ಜಿ.ಎಸ್.ನಾಯ್ಕ, ಯೋಗಾನಂದ, ಪುನೀತಾ ಜಿ.ಎಸ್., ಭುವನಸುಂದರ, ಸುಶೀಲಾ ಮೊಗೇರ, ಗಜಾನನ ನಾಯ್ಕ, ಪ್ರದೀಪ ಆಚಾರ್ಯ, , ರಾಜೇಶ ನಾಯ್ಕ, ರಾಜು ನಾಯ್ಕ, ವಿನಾಯಕ ನಾಯ್ಕ, ಸೂರ್ಯಕಾಂತ, ಯುವಜನಸೇವಾ ಕ್ರೀಡಾಧಿಕಾರಿ ಸುದೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಈ ಸುದ್ದಿಗಳನ್ನೂ ಓದಿ.
ಗ್ರಾಮಸ್ಥರ ಸಮಸ್ಯೆ ಆಲಿಸಬೇಕಿದ್ದ ಅಧಿಕಾರಿಗಳು ಸಾರಿಗೆ ಇಲಾಖೆಯ ಸ್ಥಿತಿ ಕೇಳಿ ಕನಿಕರ ವ್ಯಕ್ತಪಡಿಸಿದರು. ತಾಲೂಕಿನ ಬಸ್ ಸಮಸ್ಯೆ ಸರಿ ಇಲ್ಲ ಎನ್ನುವ ಆರೋಪ ಬಹು ದಿನಗಳಿಂದ ಕೇಳಿ ಬರುತ್ತಿತ್ತು. ಇದಕ್ಕೆ ಕಾರ್ಯಕ್ರಮದಲ್ಲಿ ಸಾರಿಗೆ ಸಿಬ್ಬಂದಿಯೋರ್ವರು ತಮ್ಮ ಕಷ್ಟವನ್ನು, ಸಮಸ್ಯೆಗೆ ಕಾರಣವನ್ನು ಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು.
2010ರಿಂದ ಸಿಬ್ಬಂದಿ ನೇಮಕವಾಗಿಲ್ಲ. ಕೊರೋನಾ ಬಳಿಕ ನೆಲಕಚ್ಚಿದ ಸಾರಿಗೆ ಇಲಾಖೆ ಇದುವರೆಗೂ ಚೇತರಿಸಿಕೊಂಡಿಲ್ಲ. ಸಿಬ್ಬಂದಿಗಳ ಕೊರತೆ, ಬಸ್ ಕೊರತೆ ಇದೆ. ಈ ಮಧ್ಯೆ ಸಿಬ್ಬಂದಿ ವಾರದ ರಜೆ ಕಡಿತ ಮಾಡಿ ಸೇವೆ ನೀಡಿದರೂ ಸಮಸ್ಯೆ ಸರಿದೂಗಿಸಲು ಆಗಲ್ಲ. ಆದರೂ ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಿದ್ದು, ಅವರಿಗೆ ಸಮಸ್ಯೆ ಆಗದಂತೆ ಬಸ್ ವ್ಯವಸ್ಥೆ ಕಲ್ಪಿಸಿದ್ದೇವೆ ಎಂದರು.
ಇದನ್ನು ಗಮನಿಸಿದ ಗ್ರಾಮಸ್ಥರು ನಿಮ್ಮ ಇಲಾಖೆಯವರದ್ದು ತಪ್ಪಿಲ್ಲ. ಆಡಳಿತ ನಡೆಸುವ ಸರ್ಕಾರ ಬಗೆಹರಿಸಬೇಕು. ತಹಶೀಲ್ದಾರರು ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲಕ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತರುವಂತೆ ಒತ್ತಾಯಿಸಿದರು.