ಕಾರವಾರ : ಡಿಸೆಂಬರ್ ೧೭ಮತ್ತು ೧೮, ೨೦೨೨ ರಂದು ಉಳವಿಯಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ೨೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಅಂಕೋಲಾದ ಶಾಂತರಾಮ ನಾಯಕ, ಹಿಚಕಡ ಅವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು ದಾಂಡೇಲಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಅಂತಿಮವಾಗಿ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಹಿತ್ಯ ಸೇವೆ ಮಾಡುತ್ತಿದ್ದವರಿಗೆ ಮೊದಲ ಆದ್ಯತೆಯನ್ನು ನೀಡಿ, ಅವರ ಸಾಹಿತ್ಯ ಕೃಷಿ, ವಯಸ್ಸು, ಹಾಗೂ ಅವರ ಒಟ್ಟಾರೆ ಸಾಧನೆಗಳನ್ನು ಪರಿಗಣಿಸಿ ಉಪಸ್ಥಿರಿದ್ದ ಎಲ್ಲ ತಾಲೂಕು ಅಧ್ಯಕ್ಷರುಗಳು ಹಾಗೂ ಜಿಲ್ಲಾ ಸಮಿತಿಯ ಸದಸ್ಯರು ಸರ್ವಾನುಮತದಿಂದ ಶಾಂತಾರಾಮ ನಾಯಕ, ಹಿಚಕಡ ಅವರ ಹೆಸರನ್ನು ಆಯ್ಕೆ ಮಾಡಿದರೆಂದು ಬಿ.ಎನ್. ವಾಸರೆ ತಿಳಿಸಿದ್ದಾರೆ.
ರಾಮಾ ನಾಯ್ಕ, ಅಧ್ಯಕ್ಷರು, ಕಸಾಪ, ಕಾರವಾರ, ಗೋಪಾಲಕೃಷ್ಣ ನಾಯಕ, ಅಧ್ಯಕ್ಷರು, ಕಸಾಪ ಅಂಕೋಲಾ ಇವರ ಸೂಚನೆ ಹಾಗೂ ಸುಬ್ರಾಯ ಭಟ್ಟ ಬಕ್ಕಳ, ಅಧ್ಯಕ್ಷರು, ಶಿರಸಿ, ಎಸ್.ಎಚ್. ಗೌಡ, ಅಧ್ಯಕ್ಷರು, ಕಸಾಪ , ಹೊನ್ನಾವರ ಇವರು ಇದರ ಅನುಮೋದನೆ ಮಾಡಿದರು.
ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಂತಾರಾಮ ನಾಯಕ ಹಿಚಕಡರವರು ೮ ಕವನಸಂಕಲನ, ೫ ಚರಿತ್ರಾ ಕೃತಿ, ೬ ಜೀವನ ಚರಿತ್ರೆ, ೫ ಪ್ರಬಂಧ ಸಂಕಲನ, ಒಂದು ಕಥಾ ಸಂಕಲನ, ೧೪ ಸಂಪಾದಿತ ಕೃತಿಗಳು ಸೇರಿದಂತೆ ಹಲವಾರು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದವರು, ಸಾಹಿತ್ಯದ ಜೊತೆಗೆ ಶೈಕ್ಷಣಿಕವಾಗಿಯೂ , ಸಾಮಾಜಿಕವಾಗಿಯೂ ಸೇವೆ ನೀಡಿರುವ ಇವರು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರು. ೮೪ ರ ಇಳಿವಯಸ್ಸಿನಲ್ಲಿಯೂ ಸಾಹಿತ್ಯದ ಕೃಷಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶಾಂತಾರಾಮ ನಾಯಕ ಹಿಚಕಡ ರವರು ಉತ್ತರ ಕನ್ನಡ ಜಿಲ್ಲಾ ೨೨ ನೇ ಕನ್ನಡ ಸಾಹಿತ್ಯ ಸಮ್ಮೇಳದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಬಿ.ಎನ್ ವಾಸರೆ ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ್, ಜಾರ್ಜ್ ಫರ್ನಾಂಡಿಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್, ಆನೆಹೊಸೂರ್, ಕಸಾಪ ತಾಲೂಕು ಘಟಕಗಳ ಅಧ್ಯಕ್ಷರುಗಳಾದ ಗೋಪಾಲಕೃಷ್ಣ ನಾಯಕ, ಅಂಕೋಲಾ, ರಾಮಾ ನಾಯ್ಕ, ಕಾರವಾರ, ಸುಬ್ಬಯ್ಯ ನಾಯ್ಕ , ಕುಮಟಾ, ಎಸ್. ಎಚ್. ಗೌಡ, ಹೊನ್ನಾವರ, ಗಂಗಾಧರ ನಾಯ್ಕ, ಭಟ್ಕಳ, ಸುಬ್ರಾಯ ಭಟ್, ಬಕ್ಕಳ ಶಿರ್ಸಿ, ಸುಬ್ರಮಣ್ಯ ಭಟ್, ಯಲ್ಲಾಪುರ, ಸುಮಂಗಲಾ ಅಂಗಡಿ, ಹಳಿಯಾಳ, ನಾರಾಯಣ ನಾಯ್ಕ, ದಾಂಡೇಲಿ, ಪಾಂಡುರಂಗ ಪಟಗಾರ , ಜೊಯಿಡಾ, ಹಾಗೂ ಜಿಲ್ಲಾ ಸಮಿತಿಯ ಸದಸ್ಯರಾದ ಜಯಶೀಲ ಆಗೇರ , ಅಂಕೋಲಾ, ಸೀತಾ ದಾನಗೀರಿ, ಜೋಯಿಡಾ, ಮುಂತಾದವರು ಉಪಸ್ಥಿತರಿದ್ದರು.
ಶಾಂತಾರಾಮ ನಾಯಕ , ಹಿಚಕಡ ರವರ ಪರಿಚಯ
ಹೆಸರು : ಶಾಂತಾರಾಮ ನಾಯಕ , ಹಿಚಕಡ
ಊರು: ಹಿಚಕಡ, ಅಂಕೋಲಾ
ಜನ್ಮ ದಿನಾಂಕ : ೨೩-೦೩-೧೯೩೯
- ಪ್ರೌಢ ಶಾಲಾ ನಿವೃತ್ತ ಮುಖ್ಯಾಧ್ಯಾಪಕರು.
- ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು
ಪದವಿ: ಎಮ್.ಎ. ಬಿ ಎಡ್.,
ರಾಷ್ಟ್ರಭಾಷಾ ವಿಷಾರದ
*ಪ್ರಕಟಿತ ಕೃತಿಗಳು*
- ಕವನ ಸಂಕಲನಗಳು…
೧) ಕಾಡಹೆಣ್ಣು
೨) ದಾರಿಮಾಡಿ ಕೊಡಿ
೩) ಅನುಭವ
೪) ಆತಂಕ
೫) ಅನುರಾಗ
೬) ನಿನಾದ
೭) ಸಂಭ್ರಮ
೮) ಒಡಲಗೀತ
ಚರಿತ್ರೆ..
೧) ಚರಿತ್ರೆಯಲ್ಲಿ ಮರೆತವರ ಕಥೆ
೨) ಸ್ವಾತಂತ್ರ್ಯ ಹೋರಾಟದ ಹೊರಳು ನೋಟ
೩) ಸ್ವಾತಂತ್ರ್ತ ಹೋರಾಟದಲ್ಲಿ ನಾಡವರು
೪) ಸ್ವಾತಂತ್ರ್ಯ ಹೋರಾಟದಲ್ಲಿ ಅಂಕೋಲೆ
೫) ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು
ಜೀವನ ಚರಿತ್ರೆ…
೧) ಮಾನಧನ ಎಮ್.ಎಚ್. ನಾಯಕ
೨) ಶಿಕ್ಷಕ ಕವಿ ವಿ.ವೆ. ತೊರ್ಕೆ
೩) ಕರುಣಾಳು ಸ.ಫ. ಗಾಂವಕರ
೪) ಕರಬಂದಿ ಡಿಕ್ಟೇಟರ ಬಾಸ್ಗೋಡ ರಾಮಾ ನಾಯ್ಕ
೫) ಚುಟುಕು ಬ್ರಹ್ಮ ದಿನಕರ ದೇಸಾಯಿ
೬) ಗೊನೆಹಳ್ಳಿಯ ಬೆಳಕು
ಪ್ರಬಂಧ ಸಂಕಲನ …
೧) ನಾಡವರು: ಒಂದು ಸಾಂಸ್ಕೃತಿಕ ಅದ್ಯಯನ
೨) ಹಂಬಲ
೩) ಹುಡುಕಾಟ
೪) ಒಡನಾಟ
೫) ಮತ್ತೆ ಮತ್ತೆ ನೆನಪಾಗುವ ಗಾಂಧಿ
ಕಥೆ..
೧) ಮಂಡಕ್ಕಿ ತಿಂದ ಗಂಗೆ
ಸಂಪಾದಿತ ಕೃತಿಗಳು …
ಸಂಪಾದಿತ ೧೪ ಕೃತಿಗಳು ಪ್ರಕಟಗೊಂಡಿವೆ.
- ಪ್ರಮುಖ ೧೭ ಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರಶಸ್ತಿ ಪುರಸ್ಕಾರಗಳು…
೧) ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ
೨)ರಾಜ್ಯ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ
೩) ಡಾ. ಸಯ್ಯದ ಜಮಿರುಲ್ಲಾ ಷರೀಪ್ ರಾಜ್ಯ ಮಟ್ಟದ ಕಾವ್ಯ ಪ್ರಶಸ್ತಿ
೪) ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕಾರ
೫) ಸಾಕ್ಷರತಾ ಜ್ಞಾನ ವಾಹಿನಿ ಸೇವಾ ಪ್ರಶಸ್ತಿ
ಮುಂತಾದವುಗಳು
ಸ್ಥಾನ ಮಾನಗಳು…
೧) ಜಿನದೇವ ಪ್ರಕಾಶನದ ಪ್ರಧಾನ ಸಂಚಾಲಕರು
೨) ಕನ್ನಡ ಪ್ರಾಥಮಿಕ ಮೂರನೇ ವರ್ಗದ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
೩) ಅಕ್ಷರ ಪರಿಣತಿ, ಸಾಕ್ಷರತಾ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರೂ ಆಗಿದ್ದರು.
೪) ಅಂಕೋಲಾ ತಾಲೂಕಾ ದ್ವಿತಿಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಆಗಿದ್ದರು.
೫) ಡಾ. ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ ಪ್ರಕಟಣಾ ಸಮಿತಿಯ ಸಂಪಾದಕ ಮಂಡಳಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ.
ಸಾಮಾಜಿಕ , ಶೈಕ್ಷಣಿಕ ಹಾಗೂ ಇತರ ಸಂಘಟನೆಗಳಲ್ಲಿ…
೧) ಅಂಕೋಲಾ ಲಯನ್ಸ ಕ್ಲಬ್ ಅಧ್ಯಕ್ಷರಾಗಿ, ಅಂಕೋಲಾ ಮಾದ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ, ಗಂಗಾವಳಿ ಹಂಚಿನ ಕಾರ್ಖಾನೆಯ ಸಂಸ್ಥಾಪಕ ನಿರ್ದೇಶಕರಾಗಿ, ಅಂಕೋಲಾ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ, ಉಕ. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ, ಮದ್ಯಪಾನ ದುರ್ವ್ಯಸನಾ ನಿವಾರಣಾ ಸಮಿತಿಯ ಸದಸ್ಯರಾಗಿ, ಪರಿಸರ ಹೋರಾಟ ಸಮಿತಿ ಸದಸ್ಯರಾಗಿ ಸೇರಿದಂತೆ ಹಲವಾರು ಸಮಾಜಮುಖಿ ಸಂಘಟನೆಗಳಲ್ಲಿ ಕಾರ್ಯುರ್ವಹಿಸಿದ್ದಾರೆ.
ಸದ್ಯ ಸಹಯಾನ ಸಂಸ್ಥೆಯ ಅಧ್ಯಕ್ಷರಾಗಿ, ದಿನಕರ ದೇಸಾಯಿ ಪ್ರತಿಷ್ಠಾನದ ಸದಸ್ಯರಾಗಿ , ಚಿತ್ತಲಾ ಸ್ಮಾರಕ ನಿಧಿಯ ನಿರ್ದೇಶಕರಾಗಿ ಹಾಗೂ ಹಲವು ಸಂಘಟನೆಗಳಲ್ಲಿ ಈಗಲೂ ಸಕ್ರೀಯರಾಗಿದ್ದಾರೆ.