ಕುಮಟಾ: ಪರೇಶ ಮೇಸ್ತಾ ಸಾವನ್ನು ಇಟ್ಟುಕೊಂಡು ರಾಜಕಾರಣ ಮಾಡಿದ ಬಿಜೆಪಿಗರ ಬಣ್ಣ ಬಯಲು ಮಾಡಲು ಹಮ್ಮಿಕೊಂಡಿರುವ ಜನಜಾಗೃತಿ ಸಮಾವೇಶ ಜಿಲ್ಲೆಯಲ್ಲಿಯೇ ಐತಿಹಾಸಿಕವಾಗಲಿದೆ ಎಂದು ಕೆಪಿಸಿಸಿ ಜಿಲ್ಲಾ ಉಸ್ತುವಾರಿ ಐವನ್ ಡಿಸೋಜಾ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ದುರಾಡಳಿತದಿಂದ ಜನ ರೋಸಿ ಹೋಗಿದ್ದಾರೆ. ಬೆಲೆ ಏರಿಕೆ ಬಿಸಿಗೆ ಬಡ ಮತ್ತು ಮಧ್ಯಮ ವರ್ಗಗಳ ಜನ ತತ್ತರಿಸುವಂತಾಗಿದೆ. ಈಗ ಹಾಲಿನ ಬೆಲೆ ಏರಿಕೆಗೆ ಮುಂದಾಗಿರುವುದು ಖಂಡನೀಯ. ಇಂಥ ಜನ ವಿರೋಧಿ ನೀತಿಯ ವಿರುದ್ಧವೇ ಈ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸಮಾವೇಶಕ್ಕೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೇವಾಲ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ.ದೇಶಪಾಂಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಸೇರಿದಂತೆ 25ಕ್ಕೂ ಅಧಿಕ ಮಾಜಿ ಸಚಿವರು, 25ಕ್ಕೂ ಅಧಿಕ ಶಾಸಕರು, 20ಕ್ಕೂ ಅಧಿಕ ಎಂಎಲ್‌ಸಿಗಳು, ಮತ್ತು ರಾಜ್ಯದ ಉದ್ದಗಲಗಳಲ್ಲಿರುವ ಎಲ್ಲ ಪ್ರಮುಖ ನಾಯಕರುಗಳು ಆಗಮಿಸಲಿದ್ದಾರೆ. ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಸುಮಾರು 20 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ನಮ್ಮೆಲ್ಲ ಬ್ಲಾಕ್ ಅಧ್ಯಕ್ಷರು, ಬೂತ್ ಅಧ್ಯಕ್ಷಕರುಗಳು ಮನೆ ಮನೆಗೆ ತೆರಳಿ ಸಮಾವೇಶಕ್ಕೆ ಆಹ್ವಾನಿಸಿದ್ದಾರೆ. ಕಾರವಾರ, ಅಂಕೋಲಾದಿAದ 10 ಸಾವಿರ, ಭಟ್ಕಳದಿಂದ 10 ಸಾವಿರ ಮತ್ತು ಶಿರಸಿ, ಹಳಿಯಾಳ ಸೇರಿದಂತೆ ಘಟ್ಟದ ಮೇಲ್ಭಾಗದಿಂದಲೂ 10 ಸಾವಿರ ಕಾರ್ಯಕರ್ತರು ಆಗಮಿಸಲಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಮೂಲಕ ಇದೊಂದು ಯಶಸ್ವಿ ಸಮಾವೇಶವಾಗಲಿದೆ. ಸಮಾವೇಶಕ್ಕೆ ಬರುವ ಎಲ್ಲ ಕಾರ್ಯಕರ್ತರಿಗೂ ಆಸನದ ವ್ಯವಸ್ಥೆ, ಕುಡಿಯುವ ನೀರು, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ, ಕುಮಟಾ ಬ್ಲಾಕ್ ಅಧ್ಯಕ್ಷ ವಿ.ಎಲ್.ನಾಯ್ಕ, ಕಾಂಗ್ರೆಸ್ ಮುಖಂಡರಾದ ರವಿಕುಮಾರ ಶೆಟ್ಟಿ, ಮಂಜುನಾಥ ಎಲ್.ನಾಯ್ಕ, ಭುವನ ಭಾಗ್ವತ್, ಆರ್.ಎಚ್.ನಾಯ್ಕ, ಮಧುಸೂದನ ಶೇಟ್, ಹೊನ್ನಪ್ಪ ನಾಯಕ, ಅನಿತಾ ಮಾಪಾರಿ ಇತರರು ಇದ್ದರು.