ಯಲ್ಲಾಪುರ: ಯಲ್ಲಾಪುರ ತಾಲೂಕಿನ ಆರತಿಬೈಲ್ ನಿನ್ನೆ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಕಬ್ಬಿಣದ ಸರಕು ಸಾಗಿಸುತ್ತಿದ್ದ ಲಾರಿಯೊಂದು ಹೊತ್ತಿಕೊಂಡು ಉರಿದಿದೆ. ಈ ಘಟನೆಯು ರಾತ್ರಿ 3 ಗಂಟೆ ಸರಿಸುಮಾರಿಗೆ ಸಂಭವಿಸಿದೆ.
ಈ ಲಾರಿಯು ಕಬ್ಬಿಣದ ರಾಡ್ಅನ್ನು ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿತ್ತು. ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಸುದ್ದಿ ತಿಳಿದ ತಕ್ಷಣ ಯಲ್ಲಾಪುರದ ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಕಗ್ಗತ್ತಲಿನಲ್ಲೇ ಹರಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿಶಾಮಕ ದಳದವರು ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ. ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.