ಹೊನ್ನಾವರ: ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆಯ ವಿದ್ಯಾರ್ಥಿಗಳು ಸ್ಥಳೀಯರೊರ್ವರಿಗೆ ಸಂಬಂಧಿಸಿದ ಕಟಾವು ಮಾಡುತ್ತಿರುವ ಭತ್ತದ ಗದ್ದೆಗೆ ತೆರಳಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ವೀಕ್ಷಿಸಿ ರೈತರೊಂದಿಗೆ ಕಿರು ಸಂವಾದ ನಡೆಸುವ ಮೂಲಕ ಕೃಷಿಯ ಮಹತ್ವ ಅರಿತರು. ಎನ್‌ಇಪಿ ಆಶಯದಂತೆ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ಮತ್ತು ನೈಜ ಕಲಿಕೆಯ ಅನುಭವವನ್ನು ನೀಡುವ ಸಲುವಾಗಿ ಶಾಲೆಯಿಂದ ಈ ತೆರನಾದ ವಿಭಿನ್ನ ಪ್ರಯತ್ನವನ್ನು ನಡೆಸಲಾಯಿತು.ಯಲಕೊಟ್ಟಿಗೆ ಜನವಸತಿ ಪ್ರದೇಶದ ಪ್ರಗತಿಪರ ರೈತರಾದ ಈರಣ್ಣ ಮರಾಠಿ ಇವರ ಗದ್ದೆಗೆ ಅವರ ಅನುಮತಿಯ ಮೇರೆಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಸುಬ್ರಾಯ ಶಾನಭಾಗ,ಸಹ ಶಿಕ್ಷಕರಾದ ಶೋಭಾ ಶಾನಭಾಗರೊಂದಿಗೆ ವಿದ್ಯಾರ್ಥಿಗಳು ಭೇಟಿ ನೀಡಿದರು.
ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಗೆ ಹೊಲಗದ್ದೆಗಳ ಕುರಿತು ಶಿಕ್ಷಕರು ಕೆಲವು ಪ್ರಶ್ನೆ ಕೇಳಿದರು. ಅನೇಕ ವಿದ್ಯಾರ್ಥಿಗಳು ಇಲ್ಲಿಯ ತನಕ ಹೊಲಗದ್ದೆಗಳಿಗೆ ಭೇಟಿಯೇ ನೀಡಿರಲಿಲ್ಲ ಎಂದು ಉತ್ತರಿಸಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಈ ರೀತಿಯ ಸನ್ನಿವೇಶವನ್ನು ಅನುಭವಿಸುತ್ತಿದ್ದರೆ ಇನ್ನು ನಗರ ಪ್ರದೇಶದ ವಿದ್ಯಾರ್ಥಿಗಳ ಸ್ಥಿತಿಯನ್ನು ನಾವು ಇಲ್ಲಿ ಅವಲೋಕಿಸಬಹುದು.
ವಿದ್ಯಾರ್ಥಿಗಳಿಗೆ ರೈತರೊಂದಿಗೆ ಸಂವಾದ ನಡೆಸಲು ಶಾಲೆಯಲ್ಲಿಯೇ ಕೆಲವೊಂದು ಪ್ರಶ್ನೆಗಳನ್ನು ನೀಡಲಾಗಿತ್ತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ರೈತರು ತಮ್ಮದೇ ಮಾತಿನಲ್ಲಿ ಗ್ರಾಮೀಣ ಶೈಲಿಯಲ್ಲಿ ಉತ್ತರಿಸಿದರು.ರೈತರಿಗೂ ಕೂಡ ಪುಟ್ಟಮಕ್ಕಳ ಬಾಯಿಂದ ಬಂದ ಪ್ರಶ್ನೆ ಗಳು ಖುಷಿ ನೀಡಿದವು.
ವಿದ್ಯಾರ್ಥಿಗಳು ಸಹ ರೈತರೊಂದಿಗೆ ಕೆಲಕಾಲ ತುಂಬಾ ಉತ್ಸಾಹದಿಂದ ಈ ಕೃಷಿ ಚಟುವಟಿಕೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇಂದಿನ ಆಧುನಿಕ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಕಾರ್ಯವನ್ನು ಮಾಡುತ್ತಿರುವುದು ಭಾರತ ದೇಶವು ಕೃಷಿಕರ ದೇಶ ಎಂದು ಹೇಳಲು ಸಾಕ್ಷಿಯಾಗಿ ಉಳಿದಿದೆ.