ಶಿರಸಿ : ಪೇಸ್‍ಬುಕ್ ಜಾಲತಾಣದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಹವ್ಯಕ ಗ್ರೂಪ್ ನಾವು ನಮ್ಮಿಷ್ಟ ಸರಿ ಸುಮಾರು ನಾಲ್ಕು ಸಾವಿರ ಸದಸ್ಯರನ್ನು ಹೊಂದಿದ್ದು ಈ ಗ್ರೂಪ್ ಅತ್ಯಂತ ಕ್ರಿಯಾಶೀಲ ವೇದಿಕೆಯ ಆಗಿ ಗುರುತಿಸಿಕೊಂಡಿದೆ. ಇಂತಹ ‘ನಾವು ನಮ್ಮಿಷ್ಟ’ ಫೇಸ್‌ಬುಕ್ ಗ್ರೂಪ್‌ನಿಂದ ನ.27ರಂದು ಹೊನ್ನಾವರ ತಾಲೂಕಿನ ಹಳದೀಪುರ ಸಮೀಪದ ಗೋ ಗ್ರೀನ್‌ನಲ್ಲಿ ದಶಮಾನೋತ್ಸವ ಸಮ್ಮೇಳನ ಹಮ್ಮಿಕೊಂಡಿದ್ದು, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೇವಲ ಹಾಸ್ಯ, ಮನರಂಜನೆಗೆ ಮೀಸಲಾದ ಹವ್ಯಕರೇ ಇರುವ ಫೇಸ್‌ಬುಕ್ ಗ್ರೂಪ್ 10 ವರ್ಷಗಳಿಂದ ಸಮ್ಮೇಳನವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ಈ ದಶಮಾನೋತ್ಸವ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಈ ಬಾರಿ ಏರ್ಪಡಿಸಲಾಗಿದೆ.
ಬೆಳಗ್ಗೆ 7 ಗಂಟೆಗೆ ಸತ್ಯನಾರಾಯಣ ವ್ರತ ನಡೆಯಲಿದ್ದು, ನಂತರದಲ್ಲಿ ರಾಜು ಸಂಪೇಸರ ಅವರಿ೦ದ ಮಿಮಿಕ್ರಿ, ನಂತರ ನೃತ್ಯ ವೈವಿಧ್ಯ, ಗಾಯನ, ಯಕ್ಷಗಾಯನ, ಚಿತ್ರ ಸಂಗೀತ ನಡೆಯಲಿದೆ. 11 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯ ಧಾರೇಶ್ವರ ಅವರನ್ನು ಅಭಿನಂದಿಸಲಾಗುವುದು. ಮಧ್ಯಾಹ್ನ 12 ಗಂಟೆಗೆ ಫ್ಯಾಷನ್ ಶೋ, ಮಕ್ಕಳಿಗೆ ಫನ್ನಿ ಗೇಮ್ಸ್, ದಂಪತಿಗಳಿಗೆ ಫನ್ನಿ ಗೇಮ್ಸ್, ರಸ ಪ್ರಶ್ನೆ, ಸ್ಪಾಟ್ ಪ್ರೈಜ್, ಕೋಲಾಟ, ಕಿರುನಾಟಕ, ಗಾಯನ, ಲಾವಣಿ, ನಾಟಕ, ಭಜನೆ, ಮಹಿಳೆಯರಿಂದ ತಾಳಮದ್ದಳೆ, 4.30ಕ್ಕೆ ಯಕ್ಷಗಾನ ನಡೆಯಲಿದೆ ಎಂದು ಗ್ರೂಪ್‌ನ ಅಡ್ಡಿನ್‌ಗಳಾದ ಸೂರ್ಯನಾರಾಯಣ ಹೆಗಡೆ ಹಾಗೂ ಸಾವಿತ್ರಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಡುವಿನ ಸಮಯದಲ್ಲಿ ಯಾರ ಮನಸಿಗೂ ನೋವಾಗದಂತೆ ಅತ್ಯುತ್ಸಾಹದಿಂದ ತೊಡಗಿಕೊಳ್ಳುವ ಹವ್ಯಕರ ಗುಂಪು ಇದಾಗಿದ್ದು, ಹಾಸ್ಯ ಹಾಗೂ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಮೂಲಕವೇ ಇದು ಈಗಾಗಲೇ ಜನ ಮೆಚ್ಚುಗೆ ಪಡೆದ ಗುಂಪಾಗಿದೆ. ಇದೀಗ 10 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂಘಟಕರು ಎಲ್ಲರ ಸಹಕಾರವನ್ನು ಕೋರಿದ್ದಾರೆ.
ಬೆಳಿಗ್ಗೆ ಹತ್ತರಿಂದ ಮಧ್ಯಾನ್ಹ ಒಂದು ಘಂಟೆಯವರೆಗೆ ದಶಮಾನೋತ್ಸವದ ಸಭಾಂಗಣದ ಸ್ಟಾಲ್ ಒಂದರಲ್ಲಿ ಕುಮಟಾ ಲಯನ್ಸ್ ಕಣ್ಣಿನ ಆಸ್ಪತ್ರೆಯಿಂದ ಸ್ಥಳದಲ್ಲೇ ನೇತ್ರದಾನ ನೋಂದಣಿಯ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.