ಇಲಾಖಾ ನಿರ್ದೇಶನದಂತೆ ಹೊಲನಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸಂಭ್ರಮ ಶನಿವಾರ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಬ್ಯಾಗ್ ರಹಿತ ದಿನವಾದ ಇಂದು ಮಕ್ಕಳನ್ನು ಹೊರ ಸಂಚಾರಕ್ಕೆ ಕರೆದುಕೊಂಡು ಹೋಗಿ ಅವರಲ್ಲಿ ಹಲವು ವಿಷಯಗಳ ಕುರಿತು ಅರಿವು ಮೂಡಿಸುವ ಪ್ರಯತ್ನವನ್ನು ಹೊಲನಗದ್ದೆ ಶಾಲಾ ಶಿಕ್ಷಕರು ಈ ರೀತಿಯಲ್ಲಿ ಮಾಡಿದ್ದು ಗಮನಸೆಳೆಯಿತು. ಕೃಷಿ ಚಟುವಟಿಕೆ ನಡೆಯುತ್ತಿರುವ ಗದ್ದೆಗೆ ತೆರಳಿ ಆಧುನಿಕ ಕೃಷಿ ಪದ್ಧತಿಯ ಕುರಿತು ಅರಿವು ಮೂಡಿಸಲಾಯಿತು. ಬೇರ್ಪಡಿಸುವಿಕೆಯ ವಿಧಾನಗಳನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಜಲ ಮೂಲಗಳ ಸಂರಕ್ಷಣೆ, ಕೆರೆಯ ಮಹತ್ವ, ಜಲ ಸಸ್ಯ ಮತ್ತು ಜಲಚರಗಳು ಈ ಕುರಿತು ಮಾಹಿತಿ ನೀಡಲಾಯಿತು. ಹೊಲನಗದ್ದೆ ಊರಿನಲ್ಲಿರುವ ಇತಿಹಾಸದ ಪುರಾತತ್ವ ಆಧಾರದ ಕುರಿತು ಮಕ್ಕಳಿಗೆ ಪರಿಚಯಿಸಲಾಯಿತು.
ಸಂಭ್ರಮ ಶನಿವಾರದ ಕಾರ್ಯಕ್ರಮದಲ್ಲಿ ಮಕ್ಕಳು ಸಂಭ್ರಮಿಸಿದರು. ಮಕ್ಕಳಿಗೆ ಅರಿವು ಹಾಗೂ ಆನಂದವನ್ನು ನೀಡಿದ ಈ ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕರಾದ ಜಯಶ್ರೀ ಪಟಗಾರ, ಸಹ ಶಿಕ್ಷಕರಾದ ಶೋಭಾ ಭಟ್ಟ, ವೀಣಾ ನಾಯ್ಕ, ಮಂಗಲಾ ನಾಯ್ಕ, ಶ್ಯಾಮಲಾ ಎಮ್ ಪಟಗಾರ, ಶ್ಯಾಮಲಾ ಬಿ ಪಟಗಾರ, ದೀಪಾ ನಾಯ್ಕ ಭಾಗವಹಿಸಿದ್ದರು. ರವೀಂದ್ರ ಭಟ್ಟ ಸೂರಿ ಮಾಹಿತಿ ನೀಡಿದರು.