ಭಟ್ಕಳ – ಗೋವಾ ಕನ್ನಡಿಗರ ಸಂಘ ಹಾಗೂ ಸಮಾಜಮುಖಿ ಸೇವಾ ಸಂಸ್ಥೆ ಕರ್ನಾಟಕ(ರಿ) ಇವರಿಂದ ಸಾಹಿತಿ ಕವಿ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರಿಗೆ ರವಿವಾರ ನ್ಯಾಷನಲ್ ಐಕಾನ್ ಅವಾರ್ಡ್ ೨೦೨೨ ನೀಡಿ ಗೌರವಿಸಲಾಯಿತು. ಜಿಲ್ಲೆಯ ಭಾವಕವಿ ಎಂದೇ ಹೆಸರಾದ ಉಮೇಶ ಮುಂಡಳ್ಳಿ ೨೦೦೩ ರಿಂದ ಇದುವರೆಗೆ ಕವನ ಸಂಕಲ ಕಥಾ ಸಂಕಲನ ಸೇರಿ ಹತ್ತಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿರುವುದರ ಜೊತೆಗೆ ಅನೇಕ ಧ್ವನಿಸುರುಳಿಗಳಿಗೆ ಧ್ವನಿಯಾಗುವುದರ ಜೊತೆ ಸ್ವರ ಸಂಯೋಜನೆಗಳನ್ನು ಮಾಡಿರುತ್ತಾರೆ. ತಮ್ಮ ನಿನಾದ ಸಾಹಿತ್ಯ ಸಂಗೀತ ಸಂಚಯದ ಮೂಲಕ ರಾಜ್ಯ ಹೊರರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ್ದು ಅಲ್ಲದೇ ಅನೇಕ ಯುವ ಸಾಹಿತಿ ಗಾಯಕರಿಗೆ ಅವಕಾಶ ನೀಡಿರುತ್ತಾರೆ.ಅವರ ಸಾಹಿತ್ಯ ಸಂಗೀತ, ಸಂಘಟನೆ ಸಾಮಾಜಿಕ ಕಾರ್ಯಗಳನ್ನು ಗುರುತಿಸಿ ಗೋವಾ ಕನ್ನಡಿಗರ ಸಂಘ ಸಮಾಜಮುಖಿ ಸೇವಾ ಸಂಸ್ಥೆ ಇವರಿಗೆ ನ್ಯಾಷನಲ್ ಐಕಾನ್ ಅವಾರ್ಡ್ ನೀಡಿ ಗೌರವಿಸಿದೆ.
ಗೋವಾ ಪಣಜಿಯ ಪ್ರತಿಷ್ಠಿತ ಸೊಲ್ಮಾರ್ ಹೊಟೆಲ್ ನಲ್ಲಿ ರವಿವಾರ ನಡೆದ ಕರ್ನಾಟಕ ಗತವೈಭವ ಕಾರ್ಯಕ್ರಮದಲ್ಲಿ ಇವರಿಗೆ ಸ್ಮರಣಿಕೆ ಪ್ರಶಸ್ತಿ ಪತ್ರ ನೀಡಿ ಸಾಲು ಹೊದಿಸಿ ಗೌರವಿಸಲಾಗಿರುತ್ತದೆ. ಜೊತೆಗೆ ಅನೇಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೂ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಡಾ.ದಿವ್ಯಾನಂದ ಸ್ವಾಮಿಜಿಗಳು ಸಾನಿಧ್ಯ ವಹಿಸಿದ್ದು, ಹುಬ್ಬಳ್ಳಿ ರೇಣುಕಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ.ಸುನಿತಾ ದೀವಟಿ ಅಧ್ಯಕ್ಷತೆ ವಹಿಸಿದ್ದರು.ಚಿತ್ರನಟಿ ರೇಣು ಶಿಕಾರಿಪುರ, ಗೋವಾ ಕನ್ನಡ ಸಂಘದ ಗೌರವಾಧ್ಯಕ್ಷ ಮಂಜುನಾಥ ಶಿವಕ್ಕನವರ್ , ಸೌಥ್ ಇಂಡಿಯನ್ ಚಲನಚಿತ್ರೋತ್ಸವ ಮುಖ್ಯಸ್ಥ ಅಲ್ತಾಪ್ ಜಹಾಂಗೀರ್, ಡಾ.ರಮೇಶ್ ಬಿ ಬೆಂಗಳೂರು ಮೊದಲಾದ ಗಣ್ಯರು ಉಪಸ್ಥಿತರಿದ್ದರು. ರಘುರಾಮ್ ಬೇವಿನಹಾಳ ಸ್ವಾಗತಿಸಿದರೆ ,ಶಿಕ್ಷಕ ಎಸ್.ಪಿ.ಶಾನವಾಡ ನಿರ್ವಹಿಸಿದರು.