ಕಾರವಾರ: ಕುಮಟಾ ಕನ್ನಡ ಸಂಘದಿಂದ ಜನಸಾಮಾನ್ಯನ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನ ನ.30ರಂದು ಕುಮಟಾದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಸದಾನಂದ ದೇಶಭಂಡಾರಿ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡದ ನೆಲ, ಜಲ, ಭಾಷೆಯ ಬಗೆಗೆ ಉತ್ತಮ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬ ಉದ್ದೇಶದಿಂದ 9 ತಿಂಗಳ ಹಿಂದೆ ಕುಮಟಾ ಕನ್ನಡ ಸಂಘವನ್ನ ಹುಟ್ಟು ಹಾಕಲಾಯಿತು. ಈ ಸಂಘಟನೆಯ ಹಿಂದೆ ಯಾವುದೇ ಹೋರಾಟದ ಉದ್ದೇಶವಿಲ್ಲ. ಸಂಘವನ್ನ ಅಸ್ತಿತ್ವಕ್ಕೆ ತಂದಾಗ ಹಲವಾರು ಸವಾಲುಗಳು ಎದುರಾದವು. ಅದರ ನಡುವೆಯೂ ಸಾಕಷ್ಟು ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಯಶಸ್ವಿಯಾಗಿ, ಇದೀಗ ಜನನುಡಿ- ಜನಸಾಮಾನ್ಯನ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷರನ್ನಾಗಿ ಹೊನ್ನಾವರದ ಪ್ರಾಧ್ಯಾಪಕ ಡಾ.ಮಂಜುನಾಥ ಅಂಬಿಗ ಅವರನ್ನು ಆಯ್ಕೆ ಮಾಡಲಾಗಿದ್ದು, ಉದ್ಯಮಿ ಸುಬ್ರಾಯ ವಾಳ್ಕೆಯವರು ಹೆಚ್ಚಿನ ಸಹಕಾರ ನೀಡಿದ್ದಾರೆ. 67ನೇ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಿಂದ ಐವರು ಸಾಧಕರಂತೆ ಒಟ್ಟು 67 ವಿವಿಧ ಕ್ಷೇತ್ರದ ಸಾಧಕರಿಗೆ ಸಮ್ಮೇಳನದಲ್ಲಿ ‘ಸಿರಿನೆಲ’ ರಾಜ್ಯೋತ್ಸವ ಪುರಸ್ಕಾರ ಪ್ರದಾನ ಮಾಡಲಾಗುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಚಂದಗಾಣಿಸಿಕೊಡುವಂತೆ ಕೋರಿದರು.
ಸಂಘದ ಸದಸ್ಯ ಜಿ.ಆರ್.ನಾಯ್ಕ ಕಾರ್ಯಕ್ರಮದ ವಿವರ ನೀಡಿ, ಅಂದು ಬೆಳಿಗ್ಗೆ 10ಕ್ಕೆ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ವೇಣುಗೋಪಾಲ ಮದ್ಗುಣಿಯವರಿಂದ ಧ್ವಜಾರೋಹಣ, ಸಾಂಸ್ಕೃತಿಕ ರಾಯಭಾರಿ ಸುಬ್ರಾಯ ವಾಳ್ಕೆ ಅವರಿಂದ ಕನ್ನಡಾಂಬೆಗೆ ಪುಷ್ಪನಮನ, ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಅವರಿಂದ ಸ್ವಾಗತ, ಕರ್ನಾಟಕ ರಾಜ್ಯ ಬೋಧಕರ ಸಂಘದ ಅಧ್ಯಕ್ಷ ಮಂಜುನಾಥ ಗಾಂವಕರ್ ಬರ್ಗಿ ಅವರಿಂದ ದಿಕ್ಸೂಷಿ ಭಾಷಣ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಂದ ಉದ್ಘಾಟನೆ, ಕಾಂತಾವರ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಪಾದ ಶೆಟ್ಟಿ ಅವರಿಂದ ಪ್ರಧಾನ ಭಾಷಣ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಮಟಾ ಕನ್ನಡ ಸಂಘದ ಕಾರ್ಯದರ್ಶಿ ದಯಾನಂದ ದೇಶಭಂಡಾರಿ, ಕೋಶಾಧ್ಯಕ್ಷ ಶಿವಯ್ಯ ಹರಿಕಾಂತ್, ಸದಸ್ಯರಾದ ವಿಕ್ರಂ ಪುರೋಹಿತ್, ರಾಜೇಶ್ ಶೇಟ್ ಇದ್ದರು.