ಗೋಕರ್ಣ: ಸೇವೆಗೆ ಉನ್ನತ ಸ್ಥಾನವಿದೆ. ಇದು ಭಾರತದ ಪರಂಪರೆ. ಇದನ್ನು ಶ್ರೀರಾಮಚಂದ್ರಾಪುರ ಮಠ ಅನುಸರಿಸಿಕೊಂಡು ಬರುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು. ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಸೇವಕ ಸೌಧ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸೇವೆ ಸಲ್ಲಿಸುವವರು ಎಲೆ ಮರೆಯ ಕಾಯಿಗಳಂತಾಗಿರುತ್ತಾರೆ. ಮಠದ ಶ್ರೀಪರಿವಾರ ಕೂಡಾ ಇದಕ್ಕೆ ಹೊರತಾಗಿಲ್ಲ. ಯಾವ ವೈಭವವೂ ಇಲ್ಲದೇ ಸೇವೆಯಲ್ಲಿ ನಿರತರಾಗಿರುತ್ತಾರೆ. ಅವರಿಗೆ ಅತ್ಯುನ್ನತ ಗೌರವ ಸಲ್ಲಬೇಕು ಎಂದರು. ಸೇವಕರನ್ನು ಮೇಲೆ ಇಡುವುದು ನಮ್ಮ ಸಂಪ್ರದಾಯ. ವಿಷ್ಣುವಿನ ವಾಹನ ಗರುಡ. ಅಂತೆಯೇ ಶಿವನ ವಾಹನ ನಂದಿ. ಗರುಡ ಹಾಗೂ ನಂದಿ ಕ್ರಮವಾಗಿ ವಿಷ್ಣು ಹಾಗೂ ಶಿವನ ಧ್ವಜ ಕೂಡಾ ಹೌದು. ಅದೇ ಸಂಪ್ರದಾಯವನ್ನು ಇಲ್ಲಿ ಮುಂದುವರಿಸಲಾಗಿದೆ ಎಂದು ಹೇಳಿದರು.
ಸೇವಕರು ವೈಭವಕ್ಕೆ ಕಾರಣರಾಗುತ್ತಾರೆ; ಆದರೆ ಸೇವಕರಿಗೆ ವೈಭವ ಇಲ್ಲ. ಅವರಿಗೂ ಗೌರವ ಸಲ್ಲಿಸಬೇಕು ಎಂಬ ದೃಷ್ಟಿಯಿಂದ ಪರಿವಾರದವರಿಗಾಗಿ ಇದೇ ಮೊದಲ ಬಾರಿಗೆ ಭವನ ನಿರ್ಮಿಸಲಾಗುತ್ತಿದೆ. ಸಾವಿರ ವರ್ಷದಿಂದ ಶ್ರೀ ಪರಿವಾರ ಇದ್ದರೂ, ಅವರಿಗಾಗಿ ಭವನ ನಿರ್ಮಾಣವಾಗುತ್ತಿರುವುದು ಇದೇ ಮೊದಲು. ಶ್ರೀಗಳ ನಿವಾಸವಾದ ಸೇವಾ ಸೌಧದಲ್ಲೂ ಪರಿವಾರದವರಿಗಾಗಿ ವಿಶೇಷವಾದ ಹಾಲ್ ನಿರ್ಮಿಸಲಾಗಿದೆ ಎಂದರು.
ಸೇವಕರು ಊಟದಲ್ಲಿ ಬೇವಿನ ಸೊಪ್ಪು ಇದ್ದಂತೆ. ಅಡುಗೆಗೆ ನೇವಿನ ಸೊಪ್ಪು ಅನಿವಾರ್ಯ. ಆದರೆ ಊಟ ಮಾಡುವಾಗ ಅದನ್ನು ಪಕ್ಕಕ್ಕೆ ತೆಗೆದಿರಿಸುತ್ತೇವೆ. ಕೆಲವೊಮ್ಮೆ ಶ್ರೀಪರಿವಾರದ ಅನಾದಾರವೂ ನಡೆದ ನಿದರ್ಶನಗಳಿವೆ. ಪರಿವಾರ ಜೀವನ ಸುಲಭವಲ್ಲ. ಇಡೀ ಜೀವನವನ್ನು ತ್ಯಾಗ ಮಾಡಿ ಬಂದಿರುತ್ತಾರೆ. ಶ್ರೀಗಳಿಗೆ ಅನ್ವಯಿಸುವ ಎಲ್ಲ ನಿಯಮಗಳೂ ಅವರಿಗೆ ಅನ್ವಯಿಸುತ್ತವೆ. ಹೊರ ಜಗತ್ತಿನಲ್ಲಿ ಲಭ್ಯವಾಗುವ ಉಡುಗೆ- ತೊಡುಗೆ, ಆಹಾರ- ವಿಹಾರ ಯಾವುದೂ ಇವರಿಗೆ ಇರುವುದಿಲ್ಲ. ಊಟ, ತಿಂಡಿ, ನಿದ್ದೆ ಎಲ್ಲವೂ ಅಸ್ತವ್ಯಸ್ತ. ಅವರದ್ದೂ ಒಂದು ರೀತಿಯ ವಿರಕ್ತ ಜೀವನ ಎಂದು ಹೇಳಿದರು.
ಸಾಲು ಸಾಲು ಉದ್ಘಾಟನೆಗಳು ನಡೆಯಲಿವೆ. ಸೇವಾಸೌಧದ ಉದ್ಘಾಟನೆ ಇದರಲ್ಲಿ ಮೊದಲನೆಯದು. ಸೌಧ ಎನ್ನುವುದು ಭವ್ಯತೆಯ ಸಂಕೇತವಾದರೆ ಸೇವಕ ಎನ್ನುವುದು ಸೇವೆಯ ಪ್ರತೀಕ. ಇಲ್ಲಿ ಸೇವಕರಿಗಾಗಿಯೇ ಭವ್ಯ ಸೌಧವನ್ನು ನಿರ್ಮಿಸಲಾಗಿದೆ. ಸ್ವಾಮೀಜಿಯವರು ವಾಸಿಸುವ ಸ್ಥಳಕ್ಕಿಂತಲೂ ಎತ್ತರದಲ್ಲಿ ಸೇವಾ ಸೌಧ ನಿರ್ಮಿಸಲಾಗಿದೆ. ಇದು ಸೇವೆಗೆ ಸಂದ ಗೌರವ ಎಂದು ಬಣ್ಣಿಸಿದರು.
ಭವ್ಯ ರಮಣೀಯ ಪರಿಸರದಲ್ಲಿ ಸೇವಕ ಸೌಧ ನಿರ್ಮಾಣವಾಗಿದೆ. ದಣಿದ ಅವರ ಮನ- ದೇಹಕ್ಕೆ ವಿಶ್ರಾಂತಿ, ಮನೋಲ್ಲಾಸ ನೀಡುವ ಭವ್ಯ ತಾಣ. ಇಲ್ಲಿ ಪರಂಪರಾ ಗುರುಕುಲ ಕೂಡಾ ನಡೆದಿತ್ತು ಎಂದು ಬಣ್ಣಿಸಿದರು.
ಭಟ್ಕಳ- ಹೊನ್ನಾವರ ಶಾಸಕ ಸುನೀಲ್ ನಾಯ್ಕ ಸೇವಾ ಸೌಧ ಉದ್ಘಾಟಿಸಿ ಮಾತನಾಡಿ, ಅಶೋಕೆಯಲ್ಲಿ ವಿಶ್ವವಿದ್ಯಾಪೀಠದ ಆವರಣದಲ್ಲಿ ಅದ್ಭುತ ಕಾರ್ಯ ಆಗುತ್ತಿದೆ. ಇಲ್ಲಿ ಸೇವೆ ಸಲ್ಲಿಸುವಂಥ ಸೇವಕರಿಗಾಗಿ ಭವ್ಯವಾದ ಸೌಧ ನಿರ್ಮಾಣವಾಗಿರುವುದು ಸಂತೋಷದ ವಿಚಾರ. ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಲು ಶ್ರೀಗಳು ಪ್ರೇರಣೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ಸೇವೆ ಸಲ್ಲಿಸಲು ಸದಾ ಬದ್ಧ ಎಂದು ನುಡಿದರು.
ಗೋಕರ್ಣ ಗ್ರಾಮಪಂಚಾಯ್ತಿ ಅಧ್ಯಕ್ಷ ಮಂಜುನಾಥ್ ಜನ್ನು ಅಧ್ಯಕ್ಷತೆ ವಹಿಸಿದ್ದರು. ಆರೇಳು ವರ್ಷಗಳಿಂದ ಇಲ್ಲಿ ನಡೆಯುತ್ತಿರುವ ಕಾರ್ಯಗಳು ಇಡೀ ಗೋಕರ್ಣಕ್ಕೆ ಹೆಮ್ಮೆ. ಶ್ರೀಗಳ ಪ್ರವೇಶದೊಂದಿಗೆ ಅಶೋಕೆಯಲ್ಲಿ ಸಂಚಲನ ಮೂಡಿದೆ. ಇಂಥ ಕಾಡು ಪ್ರದೇಶದಲ್ಲಿ ಅದ್ಭುತ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಬಣ್ಣಿಸಿದರು.
ಹವ್ಯಕ ಮಹಾಮಂಡಲದ ಅಧ್ಯಕ್ಷ ಆರ್.ಎಸ್‍ಹೆಗಡೆ ಹರಗಿ, ಡಾ.ಡಿ.ಡಿ.ಶರ್ಮಾ, ಕುಮಟಾ ಸಹಾಯಕ ಆಯುಕ್ತ ರಾಘವೇಂದ್ರ ಪಿ.ಜಗಲ್ಸರ, ಸಿಪಿಐ ವಸಂತ್ ಆಚಾರ್, ನಿರ್ಮಿತಿ ಪರಿಷತ್ತಿನ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಸೇವಕ ಸೌಧ ವಸತಿ ಸಮುಚ್ಛಯದಲ್ಲಿ ವಾಸಿಸುವ ಸುಬ್ರಾಯ ಅಗ್ನಹೋತ್ರಿ, ದಿನೇಶ್ ಹೆಗಡೆ, ರಾಮಚಂದ್ರ ಹೆಗಡೆ, ವಿನಾಯಕ ಶಾಸ್ತ್ರಿ, ವಿನೋದ್ ಹೆಗಡೆ ಅವರಿಗೆ ಮನೆಗಳ ಕೀಲಿಕೈ ಹಸ್ತಾಂತರಿಸಲಾಯಿತು.