ಅಂಕೋಲಾ : ತಾಲೂಕಿನ ಭಾವಿಕೇರಿಯಲ್ಲಿ ನಡೆದ ದುರ್ಘಟನೆಯೊಂದರಲ್ಲಿ ಇಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ. ಮನೆ ಗೋಡೆ ಕುಸಿದು ಇಬ್ಬರು ಮೃತ ಪಟ್ಟ ಧಾರುಣ ಘಟನೆ ಇದಾಗಿದೆ. ಭಾವಿಕೇರಿ ನಿವಾಸಿ ಮಧುಕರ ಸುಬ್ರಾಯ ನಾಯಕ, ಮತ್ತು ಶಾಂತಾರಾಮ ನಾರಾಯಣ ನಾಯಕ ಮೃತ ದುರ್ದೈವಿಗಳಾಗಿದ್ದಾರೆ.
ಹಳೆಯ ಮನೆಯ ಗೋಡೆ ತೆರುವುಗೊಳಿಸುತ್ತಿದ್ದ ಸಂದರ್ಭದಲ್ಲಿ ,ಆಕಸ್ಮಿಕವಾಗಿ ಗೋಡೆ ಕುಸಿದು ಬಿದ್ದ ಪರಿಣಾಮವಾಗಿ ಮಣ್ಣಿನ ಅಡಿಯಲ್ಲಿ ಸಿಲುಕಿ ಗಂಭೀರ ಸ್ಥಿತಿಯಲ್ಲಿ ಇದ್ದ ಈರ್ವರನ್ನು ಸ್ಥಳೀಯರು ತಾಲೂಕಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕಡೆ ಆಸ್ಪತ್ರೆಗೆ ಕೊಂಡಯುವ ಸಂದರ್ಭದಲ್ಲಿ ಇವರು ಕೊನೆಯುಸಿರೆಳೆದ ಬಗ್ಗೆ ವರದಿಯಾಗಿದೆ.
ಮಧುಕರ ನಾಯಕ ಅವರ ಮನೆಯ ಕೆಲಸದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ದುರ್ಘಟನೆಯ ಸಂಭವಿಸಿದ ನಂತರದಲ್ಲಿ ಗಾಯಗೊಂಡಿದ್ದ ಇಬ್ಬರನ್ನು
ಪ್ರತ್ಯೇಕ ಪ್ರತ್ಯೇಕ ಆಂಬುಲೆನ್ಸ್ ಗಳಲ್ಲಿ ಸಾಗಿಸುತ್ತಿದ್ದಾಗ ದಾರಿಮಧ್ಯೆ ಶಾಂತಾರಾಮ ನಾಯಕ ಕುಮಟಾ ಮಿರ್ಜಾನ ಬಳಿ, ಮಧುಕರ ನಾಯಕ ಕುಂದಾಪುರ – ಬೈಂದೂರು ಬಳಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ತಾಲೂಕಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಘಟನೆ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಊರಿನ ಜನ ಕಂಬನಿ ಮಿಡಿದಿದ್ದು ಊರಿನಲ್ಲಿ ಹಾಗೂ ಈರ್ವರ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿದೆ.