ಮಂಗಳೂರು: ಯಕ್ಷಗಾನ ಲೋಕದ ಹಿರಿಯ ಕಲಾವಿದ ಕುಂಬ್ಳೆ ಸುಂದರ್ ರಾವ್ ಇಂದು ಬುಧವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.ಕಳೆದ ಕೆಲವು ದಿನಗಳಿಂದ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ. ಮಂಗಳೂರಿನ ಪಂಪ್​ವೆಲ್ ಸ್ವಗೃಹದಲ್ಲಿ ಕುಂಬ್ಳೆ ಸುಂದರ್ ರಾವ್ ನಿಧನರಾಗಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಆಪ್ತರು ಮಾಹಿತಿ ನೀಡಿದ್ದಾರೆ.ಸ್ವಗೃಹದಲ್ಲಿ ಇಂದು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಸುಂದರ್ ರಾವ್ ಅಗಲಿಕೆ ವಿಷಯ ತಿಳಿಯುತ್ತಿದ್ದಂತೆ ಜನರು ಅವರ ನಿವಾಸದತ್ತ ದೌಡಾಯಿಸುತ್ತಿದ್ದಾರೆ.


ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20 ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಜನಿಸಿದ ಕುಂಬಳೆ ಸುಂದರ್ ರಾವ್ ಅವರು 1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ‌ ಸಲ್ಲಿಸಿದ್ದಾರೆ. ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಯಕ್ಷಗಾನ ಕಲಾವಿದ ಶಾಸಕರೆಂಬ ಹೆಗ್ಗಳಿಕೆ‌ಗೆ ಪಾತ್ರರಾಗಿದ್ದಾರೆ.ಕುಂಬ್ಳೆ ಸುಂದರ್ ರಾವ್ ಅವರು ಅದ್ಭುತ ವಾಕ್ ಚಾತುರ್ಯದಿಂದ, ಯಕ್ಷಗಾನದಲ್ಲಿ ಅರ್ಥಗಾರಿಕೆಗೆ ಪ್ರಸಿದ್ಧವಾಗಿದ್ದರು. ಪ್ರಾಸಬದ್ಧ ಸಂಭಾಷಣೆಯಿಂದಲೇ ಹೆಸರುವಾಸಿಯಾಗಿದ್ದರು. ನಂತರ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದು ಕಲಾಸೇವೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದರು.
ಸುಂದರ್ ರಾವ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಪಿ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಿಂದ 2018–2019ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರು ಇಬ್ಬರು ಪುತ್ರರು ಮೂವರು ಪುತ್ರಿಯರನ್ನು ಅಗಲಿದ್ದಾರೆ.

RELATED ARTICLES  ನಿಯಂತ್ರಣ ತಪ್ಪಿ ಬೈಕ್ ಗೆ ಗುದ್ದಿದ ಬುಲೆರೋ : ಬೈಕ್ ಸವಾರ ಗಂಭೀರ


ಕುಂಬ್ಳೆ ಸುಂದರ್ ರಾವ್ ಅವರು ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದಾರೆ. ಕುಂಬ್ಳೆ ಸುಂದರ್ ರಾವ್ ನಿಧನಕ್ಕೆ ಯಕ್ಷ ಕಲಾರಂಗ, ಗಣ್ಯರು ಹಾಗೂ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

RELATED ARTICLES  ಚುನಾವಣೆಗಾಗಿ ಬಿಜೆಪಿ ಶುರು ಮಾಡಿತು ಮಾಸ್ಟ್ರರ್ ಪ್ಲ್ಯಾನ್!