ಹೊನ್ನಾವರ ; ಜಡ್ಡಿಕೇರಿಯ ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನದಲ್ಲಿ ನವರಾತ್ರಿ, ದಸರಾ ಉತ್ಸವ, ನವಚಂಡಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ಜರುಗಿದ್ದು ಈ ಪ್ರಯುಕ್ತ 2-10-17 ರಂದು ಹಮ್ಮಿಕೊಂಡ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ರವಿಕುಮಾರ ಶೆಟ್ಟಿಯವರು ಮಾತನಾಡಿ ದೇವರ ಕಾರ್ಯಗಳೊಂದಿಗೆ ಪ್ರತಿಭೆಗಳನ್ನು ಪುರಸ್ಕರಿಸುತ್ತಿರುವುದು ಶ್ಲಾಘನಾರ್ಹ. ಮುಂದಿನ ದಿನಗಳಲ್ಲಿ ತಾವು ಕೇಳುವ ಯಾವುದೇ ಸಹಾಯಕ್ಕೆ ತಾನು ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದು ಭರವಸೆ ಇತ್ತರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಬಿಜೆಪಿ ಧುರೀಣರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡುತ್ತಾ ಅತ್ಯಂತ ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾವೆಲ್ಲ ದೈವೀ ಕೃಪೆಗೆ ಪಾತ್ರರಾಗಿದ್ದೀರಿ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಉಕ್ತಿಯಂತೆ ಯಾರು ಧರ್ಮವನ್ನು ರಕ್ಷಿಸುತ್ತಾರೋ ಅವರನ್ನು ಧರ್ಮವೇ ರಕ್ಷಿಸುತ್ತದೆ ಎನ್ನುತ್ತಾ ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ 90 % ಕ್ಕಿಂತ ಹೆಚ್ಚು ಅಂಕ ಪಡೆದ 60 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿದ್ದು ಪ್ರತಿಭೆಯನ್ನು ಗುರುತಿಸಿ ಪುರಸ್ಕರಿಸುವುದು ಸುಶಿಕ್ಷಿತ ಸಮಾಜದ ಆದ್ಯ ಕರ್ತವ್ಯ. ಅಂತೆಯೇ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಾಯಾ ವಾಚಾ ಮನಸಾ ಶ್ರಮಿಸಿದವರನ್ನು, ಸಹೃದಯಿ ದಾನಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಿರುವುದು ನಿಜಕ್ಕೂ ಶ್ಲಾಘನೀಯ ಹಾಗೂ ಅರ್ಥಪೂರ್ಣವಾಗಿದೆ ಎಂದು ನುಡಿದು ತನ್ನಿಂದಾದ ಸಹಾಯ ಸಹಕಾರವನ್ನು ನೀಡಲು ಯಾವತ್ತೂ ಸಿದ್ಧನಿದ್ದೇನೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್. ಡಿ. ನಾಯ್ಕ ರವರು ವಹಿಸಿದ್ದರು. ಈ ಸಂದರ್ಭದಲ್ಲಿ ಸುರೇಶ ಎಸ್., ಗುರುರಾಜಣ್ಣಯ್ಯ ಶೇರುಗಾರ, ಶಿವಾನಂದ ಭಂಡಾರಿ, ಯೋಗೇಶ ಅಪ್ಪು ನಾಯ್ಕ, ಸಿ.ಜಿ. ನಾಯ್ಕ, ಶಾಲಿನಿ ಎಸ್. ನಾಯ್ಕ. ಜಯಶ್ರೀ ಎಸ್. ನಾಯ್ಕ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.