ಹೊನ್ನಾವರ: ಪಟ್ಟಣದ ಪ್ರಖ್ಯಾತ ಶಾಲೆಯ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಥಳಿತಕ್ಕೆ ಸಂಬಂಧಿಸಿದಂತೆ ಶಾಲೆಯಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪಾಲಕರು ಹಾಗೂ ಸಾರ್ವಜನಿಕರ ಸಭೆ ಜರುಗಿತು. ಶಾಲೆಯಲ್ಲಿ ಸಹ ವಿದ್ಯಾರ್ಥಿ ನಡುವಿನ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡ ಕಾರಣವಿಟ್ಟುಕೊಂಡು ಶಾಲೆಯ ನಾಲ್ವರು ವಿದ್ಯಾರ್ಥಿಗಳಿಗೆ ನಾಲ್ವರು ಶಿಕ್ಷಕರು ಬುಧವಾರ ಬಾಸುಂಡೆ ಬರುವಂತೆ ಅಮಾನುಷವಾಗಿ ಹೊಡೆದಿದ್ದರು. ಮಕ್ಕಳ ಮೇಲೆ ಥಳಿತ ಮಾಡಿದ್ದಕ್ಕೆ ಕಾರಣ ಕೇಳಲು ಗುರುವಾರ ಕೆಲ ವಿದ್ಯಾರ್ಥಿಗಳ ಪಾಲಕರು ಬಂದಾಗ ಶಿಕ್ಷಕರೋರ್ವರು ಉಡಾಫೆಯಿಂದ ಉತ್ತರ ನೀಡಿ ಕಳುಹಿಸಿದ್ದರು. ಇದರಿಂದ ಆಕ್ರೋಶಗೊಂಡ ಪಾಲಕರು, ಪಟ್ಟಣದ ಪ್ರಮುಖರು, ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಅಮಾನವೀಯವಾಗಿ ವರ್ತಿಸುವ ಜೊತೆ ಉಡಾಫೆ ಉತ್ತರ ನೀಡಿದ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿಬರಲು ಆರಂಭಿಸಿತು.
ಈ ಬಗ್ಗೆ ಪಾಲಕರು ಮತ್ತು ಸಾರ್ವಜನಿಕರು ಶುಕ್ರವಾರ ಅಧಿಕಾರಿಗಳ ಸಮ್ಮುಖದಲ್ಲಿ ಶಾಲೆಯಲ್ಲಿ ಸಭೆ ನಡೆಸಿದರು. ಕ್ಷುಲ್ಲಕ ವಿಷಯಕ್ಕೆ ಶಿಕ್ಷಕರಾದವರು ಈ
ರೀತಿಯಾಗಿ ವಿದ್ಯಾರ್ಥಿಗಳ ಮೇಲಿನ ಅಮಾನವೀಯ
ವರ್ತನೆ ಖಂಡಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಇದರಿಂದ ವಿದ್ಯಾರ್ಥಿಯವರು ಏನಾದರೂ ಅನಾಹುತ ಮಾಡಿಕೊಂಡರೆ ಹೊಣೆ ಯಾರಾಗುತ್ತಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಸಂಸ್ಥೆಯ ಮುಖ್ಯಸ್ಥರು ರಜೆಯ ಮೇಲೆ ತೆರಳಿರುವುದರಿಂದ ಡಿ.9ರ ನಂತರ ಪಾಲಕರು ಹಾಗೂ ಸಾರ್ವಜನಿಕರು ಮತ್ತು ಅಧಿಕಾರಿಗಳು ಸಭೆ ನಡೆಸಿ ತೀರ್ಮಾನಿಸುವ ಕುರಿತು ನಿರ್ಧರಿಸಿದರು. ಸಂಸ್ಥೆಯ ಪ್ರಸುತ್ತ ಜವಾಬ್ದಾರಿ ವಹಿಸಿರುವ ಮ್ಯಾನೇಜರ್ ಹಲ್ಲೆ ಮಾಡಿರುವ ನಾಲ್ವರು ಶಿಕ್ಷಕರನ್ನು ಕಾರಣ ಕೇಳಿ ಅಮಾನತು ಮಾಡಿರುವುದಾಗಿ ಆದೇಶ ಪ್ರತಿ ನೀಡಿದರು. ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಆಗಮಿಸಿದ ಬಳಿಕ ಸಭೆ ನಡೆಸುವ ತಿರ್ಮಾನಕ್ಕೆ ಪಾಲಕರು ಒಪ್ಪಿಗೆ ಸೂಚಿಸಿದ್ದಾರೆ.
ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಪಿಎಸೈ ಮಹಾಂತೇಶ ನಾಯಕ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ವಕೀಲರಾದ ಉದಯ ನಾಯ್ಕ, ರವಿ ನಾಯ್ಕ, ದಯಾನಂದ ನಾಯ್ಕ, ಶ್ರೀಕಾಂತ ಭಂಡಾರಿ, ರಾಜೇಶ ಸಾಲೆಹಿತ್ತಲ್, ವಿಜಯ್ ಕಾಮತ್, ಉಮೇಶ ಸಾರಂಗ ಮತ್ತಿತರಿದ್ದರು.