ಕಾರವಾರ : ಉತ್ತರ ಕನ್ನಡದಲ್ಲಿ ಆತ್ಮಹತ್ಯೆಯ ಸರಣಿ ಮತ್ತೆ ಮುಂದುವರಿಯುತ್ತಿದ್ದು ಪ್ರತಿದಿನ ಹೊಂದಿಲ್ಲೊಂದು ತಾಲೂಕಿನಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದೆ. ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಕಾಳಿ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಎಂದು ವರದಿಯಾಗಿದೆ.
ನಗರದ ಜಿಪಂ ಕಚೇರಿಯಲ್ಲಿ ಕಳೆದ ಸುಮಾರು 6 ವರ್ಷಗಳಿಂದ ಎನ್.ಜಿ.ಓ. ಮುಖಾಂತರ ಪ್ರಾಜೆಕ್ಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಬೆಳಗಾವಿ ಜಿಲ್ಲೆಯ ಕಿತ್ತೂರು ಮೂಲದ ಶ್ರೀಕಾಂತ ತಮ್ಮಣ್ಣ ಮೇಲಿನಮನಿ(38) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ಶುಕ್ರವಾರ ಇವರ ದ್ವಿಚಕ್ರ ವಾಹನವು ಕಾಳಿ ಸೇತುವೆಯ ಮೇಲೆ ಪತ್ತೆಯಾಗಿತ್ತು. ಶನಿವಾರದಂದು ಬೆಳಿಗ್ಗೆ ತಾಲೂಕಿನ ಸುಂಕೇರಿ ಜಗತಕಟ್ಟಾ ಬಳಿ ಈತನ ಶವ ಪತ್ತೆಯಾಗಿದೆ. ಮೃತನ ತಂದೆ ಕಾರವಾರ ನಗರ ಠಾಣೆಗೆ ದೂರು ನೀಡಿದ್ದು ಕೆಲಸದ ಸಮಯದಲ್ಲಿ ಮೇಲಧಿಕಾರಿಗಳ ಒತ್ತಡ ಹಾಗೂ ಕಿರುಕುಳಕ್ಕೆ ಬೇಸತ್ತು ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಸ್ಥಳೀಯ ವರದಿ ಲಭ್ಯವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.