ಅಂಕೋಲಾ : ತಾಲೂಕಿನ ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಕಲ್ಲೇಶ್ವರದಲ್ಲಿ ರೈತನೋರ್ವ ಅಡಿಕೆ ಕೊಯ್ದು ಮಾಡುತ್ತಿರುವಾಗ ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಮಂಜುನಾಥ ಸಿದ್ದಿ (38) ಮೃತ ದುರ್ದೈವಿಯಾಗಿದ್ದು, ಈತ ಶನಿವಾರ ತನ್ನ ಮನೆಯ ಅಡಿಕೆ ತೋಟದಲ್ಲಿ ಮರವನ್ನೇರಿ ಕೊಯ್ದುಮಾಡುತ್ತಿರುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.
ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಮರದಿಂದ ಬಿದ್ದಮಗನನ್ನು ಕಂಡು ಆತನ ತಾಯಿ ಮಾದೇವಿ ಸಿದ್ಧಿ ಜೋರಾಗಿ ಚೀರಿಕೊಂಡಿದ್ದಾಳೆ. ತಕ್ಷಣವೇ ಮಂಜುನಾಥನ ಸಹೋದರ ಸುಬ್ರಾಯ ಸಿದ್ದಿ ಮತ್ತು ಚಿಕ್ಕಪ್ಪ ಶಿವಪ್ಪಸಿದ್ದಿಯವರು ಅಂಬ್ಯುಲೆನ್ಸ್ ಕರೆ ಮಾಡಿ ತಾಲೂಕಾ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೂ ದುರದೃಷ್ಟವಶಾತ್ ಮಂಜುನಾಥ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ.
- ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.
- “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.
- ಸರಸ್ವತಿ ಪಿ.ಯು ಕಾಲೇಜಿನಲ್ಲಿ ‘ಸಂಸ್ಕಾರಧಾರೆ’ ಅರ್ಥಪೂರ್ಣ ಕಾರ್ಯಕ್ರಮ
ಕಳೆದ ಎರಡು ವರ್ಷಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡು, ತನ್ನ ಕುಟುಂಬದ ಸಂಸಾರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಮಂಜುನಾಥ ಇದೀಗ ವಿಧಿಯಾಟಕ್ಕೆ ಬಲಿಯಾಗಿದ್ದು, ಮನೆಯ ಆಧಾರ ಸ್ಥಂಭ ಕಳೆದುಕೊಂಡ ದುಃಖದಲ್ಲಿ ತಾಯಿ ಮಾದೇವಿ, ಪತ್ನಿ ಮಂಜುಳಾ ಮತ್ತು ಮಗಳು ಭವ್ಯ ರೋಧಿಸುವಂತಾಗಿದೆ. ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಕಾನೂನು ಕ್ರಮ ಕೈಗೊಂಡಿದ್ದಾರೆ. ವಿಷಯ ತಿಳಿದ ಶಾಸಕಿ ರೂಪಾಲಿ ನಾಯ್ಕ, ನೊಂದ ಬಡ ಕುಟುಂಬಕ್ಕೆ ಸಾಂತ್ವನ ಹೇಳಿ, ಮೃತನ ಅಂತ್ಯಸಂಸ್ಕಾರಕ್ಕೆ ತುರ್ತು ಸಹಾಯಧನ ತಲುಪಿಸಿದ್ದಾರೆ.