ಹೊನ್ನಾವರ : ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಮತ್ತು ಉತ್ತರ ಕನ್ನಡ ಸಭಾಹಿತ ಮಟ್ಟಿನ ಸಮರ್ಥ ಪ್ರತಿನಿಧಿ ದಿ. ಪಿ. ವಿ. ಹಾಸ್ಯಗಾರ, ಕರ್ಕಿ ಇವರ ನೆನಪಿನಲ್ಲಿ ಕೊಡಮಾಡುವ 2022ರ ಪ್ರಶಸ್ತಿಗೆ ಬಹುಶ್ರುತ ವಿದ್ವಾಂಸ, ಯಕ್ಷಗಾನ ಸಂಶೋಧಕ, ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಕೆ. ಎಂ. ರಾಘವ ನಂಬಿಯಾರರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 50,001 ರೂಪಾಯಿ, ಸ್ಮರಣಿಕೆ ಮತ್ತು ಇತರ ಸುವಸ್ತುಗಳನ್ನು ಒಳಗೊಂಡಿದೆ.

ಇದೇ ಡಿಸೆಂಬರ್ 31 ಶನಿವಾರದಂದು ಮಧ್ಯಾಹ್ನ 4.00 ಗಂಟೆಗೆ ಕರ್ಕಿಯ (ಹೊನ್ನಾವರ) ಹವ್ಯಕ ಸಭಾಭವನದಲ್ಲಿ ನಡೆಯಲಿರುವ ಪಿ. ವಿ. ಹಾಸ್ಯಗಾರರ ವಾರ್ಷಿಕ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನಗಳು ನಡೆಯಲಿವೆ. ನಾಡಿನ ಖ್ಯಾತ ಪತ್ರಿಕೋದ್ಯಮ ತಜ್ಞ, ಲೇಖಕ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ (ಕೋಲಾರ) ಕುಲಪತಿ ಡಾ. ನಿರಂಜನ ವಾನಳ್ಳಿ ಅಧ್ಯಕ್ಷತೆ ವಹಿಸಿಲಿದ್ದಾರೆ. ಯಕ್ಷಗಾನ ವಿಮರ್ಶಕ, ಬರಹಗಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿ ಮತ್ತು ಪರಿಸರ ವಿಜ್ಞಾನಿ ಡಾ. ಪ್ರಕಾಶ ಭಟ್ (ಧಾರವಾಡ) ಸಮಾರಂಭದ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಾ. ಜಿ. ಎಲ್. ಹೆಗಡೆ, ಕುಮಟಾ ಪ್ರಾಸ್ತಾವಿಕ ನುಡಿಗಳನ್ನು ಆಡಲಿದ್ದಾರೆ. ಡಾ. ಜಿ. ಕೆ. ಹೆಗಡೆ, ಹರಿಕೇರಿ ಹಿರಿಯ ಕಲಾವಿದರ ಸಂಸ್ಮರಣೆ ಮಾಡಲಿದ್ದಾರೆ. ಶ್ರೀ ಕಡತೋಕ ಗೋಪಾಲಕೃಷ್ಣ ಭಾಗವತ (ಯಕ್ಷರಂಗ) ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಲಿದ್ದಾರೆ.

RELATED ARTICLES  "ಗೋಕರ್ಣ ಗೌರವ" 380 ನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶಿವಕುಮಾರಿ ಗಂಗಮ್ಮ ಮಾತಾಜಿ

ಸಭಾಕಾರ್ಯಕ್ರಮದ ನಂತರ ಪ್ರಸಿದ್ಧ, ನುರಿತ ತೆಂಕುತಿಟ್ಟು ಯಕ್ಷಗಾನ ಕಲಾವಿದರಿಂದ ನರಕಾಸುರ ವಧೆ ಮತ್ತು ಗರುಡ ಗರ್ವಭಂಗ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ.

ತೆಂಕು ಮತ್ತು ನಡುಬಡಗು ತಿಟ್ಟುಗಳಲ್ಲಿ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡಿ ಯಕ್ಷಗಾನ ವಲಯದಲ್ಲಿ ಚಿರಪರಿಚಿತರಾಗಿರುವ ಡಾ. ರಾಘವ ನಂಬಿಯಾರರು ತಮ್ಮ ಇಳಿವಯಸ್ಸಿನಲ್ಲಿ ಉತ್ತರ ಕನ್ನಡದ ಸಭಾಹಿತ ಮಟ್ಟಿನ (ಬಡಾಬಡಗು ತಿಟ್ಟು) ಆಳವಾದ ಅಧ್ಯಯನ ಮತ್ತು ದಾಖಲೀಕರಣದಲ್ಲಿ ತೊಡಗಿದ್ದಾರೆ ಎನ್ನುವುದು ಇಲ್ಲಿ ಉಲ್ಲೇಖನೀಯ.

RELATED ARTICLES  ನದಿಯಲ್ಲಿ ಭಾರೀ ಗಾತ್ರದ ಹೆಬ್ಬಾವು ಪ್ರತ್ಯಕ್ಷ

ಕಡತೋಕ ಕೃಷ್ಣ ಭಾಗವತ, ಪಿ. ವಿ. ಹಾಸ್ಯಗಾರ, ಧರ್ಮಶಾಲಾ ಮಹಾಬಲೇಶ್ವರ ಭಟ್ ಸಂಸ್ಮರಣಾ ವೇದಿಕೆ, ಹೆಬ್ಳೇಕೆರಿ (ಕಡತೋಕ) ಇದರ ವತಿಯಿಂದ ಹಲವು ದಶಕಗಳ ಕಾಲ ವಾರ್ಷಿಕವಾಗಿ ನಡೆಸುತ್ತಾ ಬಂದಿರುವ ಸನ್ಮಾನ ಕಾರ್ಯಕ್ರಮವನ್ನು ಈ ವರ್ಷ ಇದೇ ವೇದಿಕೆಯಲ್ಲಿ ನಡೆಸಲಾಗುವುದು. ಹಿರಿಯ ಕಲಾವಿದರಾದ ಶ್ರೀ ಕವಾಳೆ ಗಣಪತಿ ಭಾಗವತ, ಶ್ರೀ ಶ್ರೀಧರ ಹೆಗಡೆ, ನಕ್ಷೆ ಮತ್ತು ಶ್ರೀ ಹಣಜಿಬೈಲ್ ಪ್ರಭಾಕರ ಹೆಗಡೆ ಅವರನ್ನು ಸನ್ಮಾನಿಸಲಾಗುವುದು.