ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಮನದೀಪ ರಾಯ್ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ಶೇಷಾದ್ರಿಪುರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಮೂರು ದಿನಗಳ ಹಿಂದೆ ಹೃದಯಾಘಾತ ಸಂಭವಿಸಿದ್ದು, ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಮನದೀಪ ರಾಯ್ ಅವರ ಆಪ್ತರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ವೈದ್ಯರ ನಿಗಾದಲ್ಲಿ ಇರಲಿದ್ದಾರೆ ಎಂದು ತಿಳಿದು ಬಂದಿದೆ.
ಡಾ. ರಾಜ್‌ಕುಮಾರ್, ಶಂಕರ್ ನಾಗ್, ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ ಅವರಂತಹ ದಿಗ್ಗಜ ಕಲಾವಿದರು ಜೊತೆಗೆ ಮನ್‌ದೀಪ್ ರಾಯ್ ತೆರೆ ಹಂಚಿಕೊಂಡಿದ್ದರು.
ಹಲವು ದಶಕಗಳಿಂದ ಕನ್ನಡ ಚಿತ್ರ ರಂಗದ ಕಲಾವಿದರಾಗಿ ಜನಮನ ರಂಜಿಸಿರುವ ಮನದೀಪ ರಾಯ್ ಅವರು ಅನಂತ್ ನಾಗ್ ಹಾಗೂ ಶಂಕರ ನಾಗ್ ಅವರ ಜೊತೆ ಚಿತ್ರರಂಗಕ್ಕೆ ಬಂದವರು. ಮುಂಬೈನಲ್ಲಿ ಬೆಳೆದ ಮನದೀಪ ರಾಯ್ ಅವರು ಶಂಕರ್ ನಾಗ್ ಅವರ ಆಹ್ವಾನದ ಮೇರೆಗೆ ಬೆಂಗಳೂರಿಗೆ ಬಂದು ನೆಲೆಸಿದರು. ನಂತರ ಕನ್ನಡದಲ್ಲಿ ಜನಪ್ರಿಯ ಹಾಸ್ಯನಟರಾಗಿ ಗುರುತಿಸಿಕೊಂಡವರು.